ನವದೆಹಲಿ: ಕೋವಿಡ್ -19 ನಿರ್ವಹಣೆಯಲ್ಲಿ ದೆಹಲಿ ಸರ್ಕಾರಕ್ಕೆ ಸಹಾಯ ಮಾಡಲು ಅಂಡಮಾನ್ ಮತ್ತು ನಿಕೋಬಾರ್ನಿಂದ ಇಬ್ಬರು ಹಾಗೂ ಅರುಣಾಚಲ ಪ್ರದೇಶದಿಂದ ಇಬ್ಬರು ಐಎಎಸ್ ಅಧಿಕಾರಿಗಳನ್ನು ನವದೆಹಲಿಗೆ ವರ್ಗಾಯಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ದೇಶನ ನೀಡಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.
"ಅಂಡಮಾನ್ ಮತ್ತು ನಿಕೋಬಾರ್ನಿಂದ ಐಎಎಸ್ ಅಧಿಕಾರಿಗಳಾದ ಅವನೀಶ್ ಕುಮಾರ್ ಮತ್ತು ಮೋನಿಕಾ ಪ್ರಿಯದರ್ಶಿನಿ, ಅರುಣಾಚಲ ಪ್ರದೇಶದ ಐಎಎಸ್ ಅಧಿಕಾರಿಗಳಾದ ಗೌರವ್ ಸಿಂಗ್ ರಾಜಾವತ್ ಮತ್ತು ವಿಕ್ರಮ್ ಸಿಂಗ್ ಮಲ್ಲಿಕ್ ಅವರನ್ನು ನವದೆಹಲಿಗೆ ತಕ್ಷಣವೇ ವರ್ಗಾವಣೆ ಮಾಡಲು ಗೃಹ ಸಚಿವ ಅಮಿತ್ ಶಾ ನಿರ್ದೇಶನ ನೀಡಿದ್ದಾರೆ" ಎಂದು ಸಚಿವಾಲಯ ಹೇಳಿದೆ.
ದೆಹಲಿ ಸರ್ಕಾರಕ್ಕೆ ಸಹಾಯ ಮಾಡುವಂತೆ ಕೇಂದ್ರದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳಾದ ಎಸ್‌ಸಿಎಲ್ ದಾಸ್ ಮತ್ತು ಎಸ್‌ಎಸ್ ಯಾದವ್ ಅವರಿಗೆ ಕೂಡಾ ಅಮಿತ್ ಶಾ ನಿರ್ದೇಶನ ನೀಡಿದ್ದಾರೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೃಹ ಸಚಿವಾಲಯಕ್ಕೆ ಆಗಮಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಮತ್ತು ಪುರಸಭೆಯ ಮೇಯರ್‌ಗಳೊಂದಿಗಿನ ಕೋವಿಡ್-19ಗೆ ಸಂಬಂಧಿಸಿದ ಸಿದ್ಧತೆಗಳ ಕುರಿತ ಸಭೆಯಲ್ಲಿ ಭಾಗಿಯಾದರು.