ನವದೆಹಲಿ: ದೆಹಲಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೊರೊನಾ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಿ ಬೆಲೆ ಕಡಿಮೆಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೂನ್ 18ರೊಳಗೆ ದೆಹಲಿ ಸರ್ಕಾರವು ದಿನಕ್ಕೆ 18,000 ಕೋವಿಡ್-19 ಪರೀಕ್ಷೆಗಳನ್ನು ನಡೆಸಲು ಪ್ರಾರಂಭಿಸುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ಪರಿಣಾಮಕಾರಿ ಪರೀಕ್ಷೆ ಖಚಿತಪಡಿಸಿಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಕಾರ್ಯಕರ್ತರು ಸಹಾಯ ಮಾಡಬೇಕೆಂದು ಅಮಿತ್ ಶಾ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಲ್ಲರಿಗೂ ಕೊರೊನಾ ಪರೀಕ್ಷೆ ನಡೆಸಬೇಕು ಮತ್ತು ಸದಸ್ಯ ಸೋಂಕಿಗೆ ಒಳಗಾದ ವ್ಯಕ್ತಿಯ ಕುಟುಂಬ ಕಂಟೈನ್ಮೆಂಟ್ ವಲಯದಲ್ಲಿದ್ದರೆ ಅಂತವರ ಕುಟುಂಬಕ್ಕೆ 10,000 ರೂ. ನೀಡುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ದೆಹಲಿಯಲ್ಲಿ ಶೀಘ್ರದಲ್ಲೇ 450 ರೂಪಾಯಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತದೆ ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ. '450 ರೂ. ವೆಚ್ಚದೊಂದಿಗೆ ಹೊಸ ಪರೀಕ್ಷೆ ಶೀಘ್ರದಲ್ಲೇ ಲಭ್ಯವಾಗಲಿದೆ. ಕೇವಲ 15 ನಿಮಿಷದಲ್ಲೇ ಪರೀಕ್ಷೆ ನಡೆಸಲಾಗುವುದು ಎಂದಿದ್ದಾರೆ. ಘಟನಾ ಸ್ಥಳಕ್ಕೆ ಆ್ಯಂಬುಲೆನ್ಸ್ ತಲುಪುವ ಸಮಯ 36ರಿಂದ 20 ನಿಮಿಷಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಶುಲ್ಕ ನಿಗದಿಪಡಿಸಬೇಕು ಎಂದು ನಾವು ಸೂಚಿಸಿದ್ದೇವೆ. ದೆಹಲಿಯಲ್ಲಿ ಕೊರೊನಾ ಪರೀಕ್ಷಾ ಶುಲ್ಕವನ್ನು ಶೇಕಡಾ 50ರಷ್ಟು ಕಡಿತಗೊಳಿಸುವಂತೆ ಒತ್ತಾಯಿಸಿದ್ದೇವೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಕುಮಾರ್ ಗುಪ್ತಾ ಹೇಳಿದ್ದಾರೆ.
ಪ್ರತಿಯೊಬ್ಬರೂ ಪರೀಕ್ಷೆ ಮಾಡಿಸಿಕೊಳ್ಳುವ ಹಕ್ಕನ್ನು ಹೊಂದಿರಬೇಕು. ಎಲ್ಲಾ ದೇಶಗಳು ಅನುಸರಿಸುತ್ತಿರುವ ಪರೀಕ್ಷೆ ಮತ್ತು ಪತ್ತೆ ನೀತಿಯ ಮೂಲಕ ಮಾತ್ರ ಚಿಕಿತ್ಸೆ ಸಾಧ್ಯ. ಇದನ್ನು ಅಮಿತ್ ಶಾ ಕೂಡ ಒಪ್ಪಿಕೊಂಡಿದ್ದಾರೆ ಎಂದು ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅನಿಲ್ ಚೌಧರಿ ಹೇಳಿದ್ದಾರೆ.