ನವದೆಹಲಿ : ಪೂರ್ವ ಲಡಾಖ್ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಎಡೆಬಿಡದೇ ನಡೆಯುತ್ತಿರುವ ಕಾರ್ಪ್ಸ್ ಕಮಾಂಡರ್ ಮಟ್ಟದ ಎಲ್ಲಾ ಸಭೆಗಳಂತೆಯೇ ಸೋಮವಾರದಂದು ಲಡಾಖ್ನ ಚುಶುಲ್ ಕಣಿವೆಯ ಮೊಲ್ಡೊದಲ್ಲಿ 14 ಗಂಟೆಗಳ ಕಾಲ ನಡೆದ ಮ್ಯಾರಾಥಾನೋಪಾದಿಯ ಮಾತುಕತೆ ಸಹ ಯಾವುದೇ ಸಕಾರಾತ್ಮಕ ಫಲಿತಾಂಶ ನೀಡಲಿಲ್ಲ.
ಈ ಬೆಳವಣಿಗೆಗಳನ್ನು ಹತ್ತಿರದಿಂದ ಬಲ್ಲ ಮೂಲವೊಂದರ ಪ್ರಕಾರ ಚೀನಾವು ಪೂರ್ವ ಲಡಾಖಿನಲ್ಲಿ ತನ್ನ ಸೇನಾ ಪಡೆಗಳನ್ನು ಕದಲಿಸುವ ವಿಷಯದಲ್ಲಿ ಹಠಮಾರಿತನ ತೋರಿಸುತ್ತಿದೆ. ಅದು ಪ್ಯಾಂಗಾಂಗ್ ಸರೋವರದ ಉತ್ತರ ದಂಡೆ, ಡೆಸ್ಪ್ಯಾಂಗ್ ಮತ್ತು ಬಿಸಿ ನೀರಿನ ಬುಗ್ಗೆಗಳಿರುವ ಪ್ರದೇಶಗಳಲ್ಲಿ ತಾನು ಇರಿಸಿರುವ ಪ್ರಬಲ ಸೇನಾ ಪೊಸಿಶನ್‍ಗಳನ್ನು ಯಾವುದೇ ಬಗೆಯಲ್ಲಿ ಕದಲಿಸಲು ಸಂಪೂರ್ಣವಾಗಿ ನಿರಾಕರಿಸಿದೆ. ಅದಕ್ಕಿಂತಲೂ ಹೆಚ್ಚಾಗಿ ಅದು ಪ್ಯಾಂಗಾಂಗ್ ಟ್ಸೊದ ದಕ್ಷಿಣ ದಂಡೆಯಲ್ಲಿ ಹೊಸದಾಗಿ ಆಕ್ರಮಿಸಿಕೊಂಡ ಪ್ರಬಲ ಪೊಸಿಶನ್‍ಗಳಿಂದ ಭಾರತದ ಸೈನ್ಯವು ಕೆಳಕ್ಕಿಳಿಯಬೇಕು ಎಂದು ಆಗ್ರಹಿಸಿದೆ.
ಇದನ್ನು ಭಾರತವು ಸ್ಪಷ್ಟವಾಗಿ ನಿರಾಕರಿಸಿದೆ. ಎರಡೂ ದೇಶಗಳ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗದ ಹಿನ್ನೆಲೆಯಲ್ಲಿ ಪುನಃ ಎರಡೂ ಕಡೆಯ ಪ್ರತಿನಿಧಿಗಳೂ ಮುಂದಿನ ಹದಿನೈದು ದಿನಗಳ ಒಳಗಾಗಿ ಸಭೆ ನಡೆಸಲು ಪರಸ್ಪರ ಒಪ್ಪಿಕೊಂಡಿವೆ. ಏಪ್ರಿಲ್ - ಮೇ ತಿಂಗಳಲ್ಲಿ ನಡೆದ ಆಕ್ರಮಣಕಾರಿ ಸ್ವರೂಪದ ಸೇನಾ ತಿಕ್ಕಾಟಗಳ ನಂತರದಲ್ಲಿ ಹಲವು ಹಂತಗಳಲ್ಲಿ ಅನೇಕ ಸಂಧಾನ ಮಾತುಕತೆಗಳು ಜರುಗಿವೆ. ಮೋದಿ-ಕ್ಸಿ ಮಟ್ಟದ ಮಾತುಕತೆಗಳು ಎಲ್ಲಾ ಹಂತದಲ್ಲಿಯೂ ಮಾತುಕತೆಗಳು ನಡೆದು ವಿಫಲಗೊಂಡ ನಂತರದಲ್ಲಿ ಇದೀಗ ಉಳಿದಿರುವ ಈಗ ಕೊನೆಯಲ್ಲಿ ಒಂದೇ ಭರವಸೆ ಉಳಿದಿದೆ. ಎರಡೂ ದೇಶಗಳ ನಡುವಿನ ಅತ್ಯುನ್ನತ ನಾಯಕತ್ವದ ನಡುವೆ ಸಂದಾನ ಮಾತುಕತೆಗಳು ನಡೆದು ಈ ಬಿಕ್ಕಟ್ಟು ಪರಿಹಾರವಾಗುತ್ತದೆ ಎಂಬುದೇ ಆ ಭರವಸೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಕ್ಸಿ ಜಿನ್ಪಿಂಗ್ ಇಬ್ಬರೂ ರಾಷ್ಟ್ರವಾದಿ ನಾಯಕರಾಗಿದ್ದು ತಂತಮ್ಮ ದೇಶಗಳಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿ ಏರಿದವರಾಗಿದ್ದು ಎರಡೂ ದೇಶಗಳ ನಡುವೆ ಒಂದು ಪರಿಹಾರ ರೂಪಿಸಲು ಬೇಕಾದ ಸಾಮರ್ಥ್ಯವನ್ನು ಇಬ್ಬರೂ ಹೊಂದಿದ್ದಾರೆ. ಒಂದೊಮ್ಮೆ ಇಬ್ಬರ ನಡುವೆ ಇಂತಹ ಒಂದು ಪರಿಹಾರ ಸೂತ್ರ ಸಾಧ್ಯವಾಗದ ಪಕ್ಷದಲ್ಲಿ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಬಳಿ (LAC) ಪರಿಸ್ಥಿತಿಗಳು ಮತ್ತಷ್ಟು ಹದಗೆಟ್ಟು ಚೀನಾವು ಅಕ್ಟೋಬರ್ ಹೊತ್ತಿಗೆ ಭಾರತವನ್ನು ಬಹಿರಂಗ ಸಂಘರ್ಷಕ್ಕೆ ಎಳೆಯುವ ಸಾಧ್ಯತೆಯೂ ಇಲ್ಲದಿಲ್ಲ. ಸದ್ಯದ ಮಟ್ಟಿಗೆ ಹೇಳುವುದಾದರೆ ಎರಡೂ ದೇಶಗಳ ಸೇನಾಪಡೆಗಳು ಗಡಿಯಲ್ಲಿ ಪಾಲಿಸಿಕೊಂಡು ಬಂದಿದ್ದ ಪ್ರಮಾಣಿತ ನಡಾವಳಿಗಳು ಮತ್ತು ಸೇನಾ ತುಕಡಿಗಳನ್ನು ಹಿಂಪಡೆಯುವ ಕುರಿತ ಶಿಷ್ಟಾಚಾರಗಳೆಲ್ಲವೂ ಮುರಿದು ಬಿದ್ದಿವೆ.
ಅಕ್ಟೋಬರ್ ನಲ್ಲೇ ಏಕೆ?
ನವೆಂಬರ್ ಮತ್ತು ಅದರ ನಂತರದಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿ ಯಾವುದೇ ನರಪಿಳ್ಳೆಯೂ ಯಾವುದೇ ಚಟುವಟಿಕೆ ನಡೆಸುವುದು ಅಸಾಧ್ಯ. ಅಲ್ಲಿನ ಹವಾಮಾನ ಅಷ್ಟು ಶೀತಮಯವಾಗಿರುತ್ತದೆ. ಭಾರಿ ಹಿಮಪಾತ, ಶೀತದಿಂದ ಕೊರೆಯುವ ತಾಪಮಾನ, ಪ್ರತಿಕೂಲ ಹವೆ ಇದ್ದು ಯಾವುದೇ ಚಟುವಟಿಕೆ ನಡೆಸಲು ತಡೆಯೊಡ್ಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯುದ್ಧ ನಡೆಸುವ ಮಾತಂತೂ ದೂರವೇ ಉಳಿಯಿತು. ಮತ್ತೊಂದೆಡೆ, ಮಂಜುಗಡ್ಡೆಯಿಂದ ಆವೃತವಾದ ಹಿಮಾಲಯದ ಪರ್ವತಗಳಲ್ಲಿ ಹಿಮ ಕರಗುವವರೆಗೂ ಬೃಹತ್ ಸಂಖ್ಯೆಯಲ್ಲಿ ಸೈನಿಕರನ್ನು ಮತ್ತು ಯುದ್ಧಾಸ್ತ್ರಗಳನ್ನು ಇಟ್ಟುಕೊಳ್ಳುವುದು ಎರಡೂ ದೇಶಗಳಿಗೆ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ.
ಆರ್ಥಿಕ ಅಂಶಗಳ ಕಾರಣದಿಂದಾಗಿ ಮತ್ತು ಕೊವಿಡ್-19ರ ದಾಳಿಯಿಂದಾಗಿ ಭಾರತದ ಆರ್ಥಿಕತೆಯು ತೀವ್ರವಾಗಿ ಕುಸಿಯುತ್ತಿದ್ದು ಮುಂಬರುವ ಸುಗ್ಗಿಯ (ಅಕ್ಟೋಬರ್-ಜನವರಿ) ಕಾಲದಲ್ಲಿ ‘ರಾಬಿ’ಬೆಳೆ ಖಾತ್ರಿಯಾದಲ್ಲಿ ಹಬ್ಬ, ಮದುವೆ ಮುಂಜಿಗಳು ನಡೆದು ಸರಕುಗಳಿಗೆ ಬೇಡಿಕೆ ಹೆಚ್ಚಾದಲ್ಲಿ ಆರ್ಥಿಕತೆ ಚೇತರಿಕೆ ಕಾಣಬಹುದು ಎಂಬ ನಿರೀಕ್ಷೆಯಿದೆ. ಈ ಮೂಲಕ ಈಗ ಸಂಕುಚಿತಕೊಳ್ಳುತ್ತಿರುವ ಆರ್ಥಿಕತೆ ಕೊಂಚ ಮಟ್ಟಿಗೆ ಚೇತರಿಸಿಕೊಳ್ಳುತ್ತದೆಯಲ್ಲದೇ ಹೆಚ್ಚಿನ ನಷ್ಟವನ್ನು ತಡೆಯುತ್ತದೆ. ಭಾರತ ಆರ್ಥಿಕವಾಗಿ ಚೇತರಿಸಿಕೊಳ್ಳುವ ಅವಕಾಶವನ್ನು ಹತ್ತಿಕ್ಕಲು ಚೀನಾ ನೋಡುತ್ತಿರುವುದರಿಂದ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಬಳಿ ಬೇಕೆಂದೇ ಪರಿಸ್ಥಿತಿಯನ್ನು ಹದಗೆಡಿಸಲು ಯತ್ನಿಸಬಹುದು.
ಈಗ ಇರುವಂತೆ 40,000ದಷ್ಟು ಹೆಚ್ಚುವರಿ ಸೈನಿಕರನ್ನು ಭಾರಿ ಸೇನಾ ಸಾಮಗ್ರಿಗಳೊಂದಿಗೆ ಗಡಿಯಲ್ಲಿ ನಿಭಾಯಿಸುವುದು ದೇಶದ ಆರ್ಥಿಕತೆಗೆ ದೊಡ್ಡ ಹೊರೆಯಾಗುತ್ತದೆ. ಹಲವಾರು ಹಂತಗಳು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚೀನಾದ ರಕ್ಷಣಾ ಸಚಿವ ವೆಯ್ ಫೆಂಗೆ ಅವರನ್ನು ಕಳೆದ ಸೆಪ್ಟೆಂಬರ್ 4 ರಂದು ರಷ್ಯಾದ ಮಾಸ್ಕೋದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಂತೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಸೆಪ್ಟೆಂಬರ್ 10ರಂದು ಮಾಸ್ಕೋದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಚೀನಾ ಕುರಿತ ಭಾರತದ ವಿಶೇಷ ಪ್ರತಿನಿಧಿ (SR) ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಅಜಿತ್ ದೋವಲ್ ಅವರು ಚೀನಾದ ವಿಶೇಷ ಪ್ರತಿನಿಧಿ ವ್ಯಾಂಗ್ ಯಿ ಅವರನ್ನು ಜುಲೈ 6 ರಂದು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಕಾರ್ಪ್ಸ್ ಕಮಾಂಡರ್ಗಳ ಮಟ್ಟದಲ್ಲಿ, ಸೋಮವಾರ ನಡೆದ ಸಭೆಯು ಆರನೇ ಲೆಫ್ಟಿನೆಂಟ್ ಜನರಲ್ ಮಟ್ಟದ ಸಭೆಯಾಗಿತ್ತು. ಇದಕ್ಕೂ ಮೊದಲು ಜೂನ್ 6, ಜೂನ್ 22, ಜುಲೈ 14 ಮತ್ತು ಆಗಸ್ಟ್ 2ರಂದು ಚುಶುಲ್ - ಮೊಲ್ಡೊದಲ್ಲಿ ಸಂಧಾನ ಸಭೆಗಳು ನಡೆದಿದ್ದವು. ಈ ಬಾರಿ ನಡೆದ ಸಭೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಚೀನಾದ ಉಸ್ತುವಾರಿ ಜಂಟಿ ಕಾರ್ಯದರ್ಶಿ ನವೀನ್ ಶ್ರೀವಾತ್ಸವ ಅವರು ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್, ಕಮಾಂಡರ್ 14 ಕಾರ್ಪ್ಸ್ ಹಾಗೂ ಅಕ್ಟೋಬರ್ ನಲ್ಲಿ ಲೆ.ಜನರಲ್ ಸಿಂಗ್ ಅವರ ಜಾಗಕ್ಕೆ ಬರಲಿರುವ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಜಂಟಿ ಹೇಳಿಕೆ ಸೆಪ್ಟೆಂಬರ್ 10ರಂದು ಎರಡೂ ದೇಶಗಳ ವಿದೇಶಾಂಗ ಸಚಿವರುಗಳು ಪರಸ್ಪರ ಮಾತುಕತೆ ನಡೆಸಿ ಐದು ಅಂಶಗಳ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದ ಹಿನ್ನೆಲೆಯಲ್ಲಿ ಸೋಮವಾರದ ಮಾತುಕತೆಗೆ ಹೆಚ್ಚಿನ ಮಹತ್ವ ದೊರೆತಿತ್ತು.
ಕುತೂಹಲದ ವಿಷಯ ಏನೆಂದರೆ, ಜಂಟಿ ಹೇಳಿಕೆಯ ಮೊದಲ ಅಂಶದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾದ ಅಧ್ಯಕ್ಷ ಕ್ಸಿ - ಜಿನ್ಪಿಂಗ್ ಇಬ್ಬರೂ ಸೇರಿ ವುಹಾನ್‍ನಲ್ಲಿ (ಏಪ್ರಿಲ್ 27-28, 2018_ ಮತ್ತು ಮಾಮಲ್ಲಪುರಂನಲ್ಲಿ (ಅಕ್ಟೋಬರ್ 12,2019) ನಡೆಸಿದ ಅನೌಪಚಾರಿಕ ಸಭೆಗಳಲ್ಲಿ ಮಾಡಿಕೊಂಡಿದ್ದ ಒಪ್ಪಂದಗಳನ್ನು ಉಲ್ಲೇಖಿಸಿ, ‘ನಾಯಕರ’ “ಸರಣಿ ಒಪ್ಪಂದ’ಗಳನ್ನು ಒತ್ತಿ ಹೇಳಲಾಗಿದೆ. ಸದ್ಯದಲ್ಲಿ ಗಡಿ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ಲಭ್ಯವಿರುವ ಎಲ್ಲ ಯಂತ್ರಾಂಗಗಳ ಮೂಲಕ ಎಲ್ಲ ಹಂತಗಳಲ್ಲಿ ನಡೆದ ಪ್ರಯತ್ನಗಳು ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಮೋದಿ - ಕ್ಸಿ ಭೇಟಿಯ ಉಲ್ಲೇಖವು ಮತ್ತೊಮ್ಮೆ ಇದು ಮೋದಿ - ಕ್ಸಿ ಮಟ್ಟದಲ್ಲೇ ಪರಿಹಾರವಾಗಬಲ್ಲದು ಎಂಬುದಕ್ಕೆ ಸೂಚನೆಯಾಗಿದೆ.
ಭಾರತ - ಚೀನಾಗಳ ನಡುವಿನ ಸಮಸ್ಯೆಯ ಲಕ್ಷಣವೇನು ಎಂದರೆ ಈ ಸಮಸ್ಯೆಯನ್ನು ಉಭಯ ದೇಶಗಳ ಅತ್ಯುನ್ನತ ಕಚೇರಿಗಳೇ ಕುಳಿತ ಚರ್ಚೆ ನಡೆಸಬೇಕಿದೆ. ಬಹುದಿನಗಳಿಂದ ಪರಿಹಾರವಾಗದೇ ಉಳಿದಿರುವ ಈ ಗಡಿ ಸಮಸ್ಯೆಯನ್ನು ಪರಿಹರಿಸಬಲ್ಲ ಸಾಮರ್ಥ್ಯ ಇರುವುದು ಸಹ ಆ ಮಟ್ಟದಲ್ಲೇ. ವಸಾಹತು ಹಿನ್ನೆಲೆ, ಸೇನಾ ಮಟ್ಟದ ಇಲ್ಲವೇ ರಾಯಭಾರಿಗಳ ಮಟ್ಟದಲ್ಲಿನ ಸಂಧಾನ ಮಾತುಕತೆಗಳಿಂದ ಈ ಸಮಸ್ಯೆಯನ್ನು ಸಮಗ್ರವಾಗಿ ಪರಿಹರಿಸಿಕೊಳ್ಳುವುದು ಸಾಧ್ಯವೇ ಇಲ್ಲ.
ಚಾರಿತ್ರಿಕ ಮಟ್ಟದ ಸೇನಾ ಜಮಾವಣೆ ಒಂದು ಕಡೆ ಭಾರತ ಮತ್ತು ಚೀನಾಗಳ ನಡುವೆ ಸಂಧಾನ ಮಾತುಕತೆಗಳು ನಡೆಯುತ್ತಿರುವಾಗಲೇ ಎರಡೂ ದೇಶಗಳೂ ಹಿಮಾಲಯಗಳ ಗಡಿಯುದ್ದಕ್ಕೂ ಹಿಂದೆಂದೂ ಇಲ್ಲದ ರೀತಿಯಲ್ಲಿ ತಂತಮ್ಮ ಸೈನಿಕರನ್ನು, ಸೇನಾ ಸಾಮಗ್ರಿ ಮತ್ತು ಶಸ್ತ್ರಾಸ್ತ್ರಗಳನ್ನು ಜಮಾವಣೆ ಮಾಡತೊಡಗಿವೆ. ಸದ್ಯ ಎರಡೂ ಕಡೆಗಳಲ್ಲಿ 1,00,000ಕ್ಕೂ ಹೆಚ್ಚು ಸೈನಿಕರನ್ನು ವಾಸ್ತವಿಕ ಗಡಿ ನಿಯಂತ್ರಣಾ ರೇಖೆಯ ಇಕ್ಕೆಲಗಳಲ್ಲಿ ಜಮಾವಣೆ ಮಾಡಲಾಗಿದೆ. ಈ ಸೇನಾ ತಯಾರಿಯು ಇಲ್ಲಿನ ಮೂಲ ಸೌಕರ್ಯ ಮತ್ತು ಸೇನಾ ಸೌಕರ್ಯಗಳನ್ನು ಅತ್ಯಂತ ತ್ವರಿತ ಗತಿಯಲ್ಲಿ ಅಭಿವೃದ್ಧಿಪಡಿಸುವಂತೆ ಮಾಡಿದೆ. ಚೀನಾವು ತನ್ನ ಪಡೆಗಳನ್ನು ದೊಡ್ಡ ಸಂಖ್ಯೆಯಲ್ಲಿ LAC ಬಳಿಯಲ್ಲಿ ಜಮಾವಣೆ ಮಾಡುತ್ತಿದ್ದಂತೆಯೇ ಭಾರತವು ವೇಗವಾಗಿ ತನ್ನ ಪಾಕಿಸ್ತಾನ-ಕೇಂದ್ರಿತ ಸೇನಾ ತಂತ್ರದಿಂದ ಇದೀಗ ಚೀನಾ ಕೇಂದ್ರಿತ ಸೇನಾ ತಂತ್ರವಾಗಿ ಮಾರ್ಪಾಡುಗೊಳಿಸಿಕೊಳ್ಳತೊಡಗಿದೆ.