ಸದಾ ಎದುರಾಗುವ ಸವಾಲು ಹಾಗೂ ಯಾವಾಗಲೂ ಬದಲಾಗುವ ಸಮಾಜದ ಅಗತ್ಯತೆಗಳಿಗೆ ತಕ್ಕಂತೆ ಭಾರತದ ಸಂವಿಧಾನಕ್ಕೆ ತಿದ್ದುಪಡಿಗಳನ್ನು ಮಾಡಲಾಗಿದೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಈ ಕಾರ್ಯ ನಡೆದಿದ್ದು, ಇದುವರೆಗೆ 103 ತಿದ್ದುಪಡಿಗಳನ್ನು ಮಾಡಲಾಗಿದೆ. ಇವುಗಳಲ್ಲಿ ಕೆಲವು ದೇಶದ ದಿಕ್ಕನ್ನೇ ಬದಲಿಸಿದ್ದು ಅಂತಹವುಗಳ ಪಟ್ಟಿ ಹೀಗಿದೆ:
ಮೊದಲ ತಿದ್ದುಪಡಿ (1951): ನ್ಯಾಯಾಂಗ ಹಸ್ತಕ್ಷೇಪದಿಂದ ಭೂ ಸುಧಾರಣೆ ಮತ್ತಿತರ ಕಾಯ್ದೆಗಳಿಗೆ ರಕ್ಷಣೆ ಒದಗಿಸುವುದು ಇದರ ಉದ್ದೇಶ. ಮೂರು ಷರತ್ತುಬದ್ಧ ಮಿತಿಗಳೊಂದಿಗೆ ಮೂಲಭೂತ ಹಕ್ಕಾದ ‘ವಾಕ್ ಸ್ವಾತಂತ್ರ್ಯ’ವನ್ನು ತಿದ್ದುಪಡಿಯಡಿ ಮರುವ್ಯಾಖ್ಯಾನಿಸಲಾಯಿತು.
ಏಳನೇ ತಿದ್ದುಪಡಿ (1956): ಈ ತಿದ್ದುಪಡಿ ಮೂಲಕ ಭಾಷಾವಾರು ಪ್ರಾಂತದ ಆಧಾರದ ಮೇಲೆ ಇಡೀ ದೇಶವನ್ನು 14 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಯಿತು. ಭಾಷೆಗಳ ರಕ್ಷಣೆಗಾಗಿ ಪ್ರಾಥಮಿಕ ಶಾಲೆಗಳಲ್ಲಿ ಮಾತೃ ಭಾಷೆಯನ್ನು ಬೋಧನಾ ಮಾಧ್ಯಮವಾಗಿ ಕಡ್ಡಾಯಗೊಳಿಸುವ 350-ಎ ವಿಧಿಯನ್ನು ತಿದ್ದುಪಡಿಯಡಿ ಸೇರಿಸಲಾಯಿತು.
24ನೇ ತಿದ್ದುಪಡಿ (1971): ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡುವ ಅಧಿಕಾರ ಲೋಕಸಭೆಗೆ ಇದೆ. ಲೋಕಸಭೆ ಹಾಗೂ ರಾಜ್ಯಸಭೆ ಹೀಗೆ ಉಭಯ ಸದನಗಳು ಅಂಗೀಕರಿಸಿದ ಯಾವುದೇ ಸಾಂವಿಧಾನಿಕ ತಿದ್ದುಪಡಿಯನ್ನು ಭಾರತದ ರಾಷ್ಟ್ರಪತಿಗಳು ಕಡ್ಡಾಯವಾಗಿ ಅನುಮೋದಿಸತಕ್ಕದ್ದು ಎಂದು ಸಾರಿತು ಈ ತಿದ್ದುಪಡಿ.
42ನೇ ತಿದ್ದುಪಡಿ (1976): ‘ಸಮಾಜವಾದಿ, ಜಾತ್ಯತೀತ ಮತ್ತು ಸಾರ್ವಭೌಮ’ ಎಂಬ ಪದಗಳನ್ನು ಸಂವಿಧಾನದ ಪ್ರಸ್ತಾವನೆಗೆ ಸೇರಿಸಿದ ತಿದ್ದುಪಡಿ ಇದು. ಅಲ್ಲದೆ, ನಾಗರಿಕರ ಮೂಲಭೂತ ಕರ್ತವ್ಯಗಳನ್ನು ಪಟ್ಟಿ ಮಾಡಲಾಯಿತು. ನ್ಯಾಯಾಂಗ ಪರಿಶೀಲನೆ ಮತ್ತು ರಿಟ್ ಅರ್ಜಿಗಳ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳ ವ್ಯಾಪ್ತಿಯನ್ನು ಮೊಟಕುಗೊಳಿಸಲಾಯಿತು. ರಾಷ್ಟ್ರೀಯ ಕಾನೂನು ಸೇವೆಗಳ ಸಂಸ್ಥೆ ತಿದ್ದುಪಡಿ ಮೂಲಕ ಅಸ್ತಿತ್ವಕ್ಕೆ ಬಂತು.
44ನೇ ತಿದ್ದುಪಡಿ (1978): ತುರ್ತು ಪರಿಸ್ಥಿತಿಯ ಘೋಷಣೆಯ ನಿಯಮಗಳಲ್ಲಿ (ತುರ್ತು ಪರಿಸ್ಥಿತಿ ಘೋಷಣೆಯ ಸಂದರ್ಭದಲ್ಲಿ!), ‘ಆಂತರಿಕ ಕ್ಷೋಭೆ’ ಎಂಬ ಪದಕ್ಕೆ ಬದಲಾಗಿ ‘ಸಶಸ್ತ್ರ ದಂಗೆ’ ಎಂಬ ಪದ ಸೇರಿಸಲಾಯಿತು. ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸಂಪುಟ ತನ್ನ ತೀರ್ಮಾನವನ್ನು ಲಿಖಿತವಾಗಿ ತಿಳಿಸದ ಹೊರತು ರಾಷ್ಟ್ರಪತಿಗಳು ತುರ್ತು ಪರಿಸ್ಥಿತಿ ಘೋಷಿಸುವಂತಿಲ್ಲ ಎಂದು ಈ ಮೂಲಕ ಸಾರಲಾಯಿತು. ಜೊತೆಗೆ ಆಸ್ತಿ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದು ಹಾಕಲಾಯಿತು.
73 ನೇ, 74 ನೇ ತಿದ್ದುಪಡಿಗಳು (1992): ಅಧಿಕಾರ ವಿಕೇಂದ್ರೀಕರಣದ ಮೂಲಕ ಸ್ಥಳೀಯ ಸ್ವ-ಆಡಳಿತ ಪರಿಚಯಿಸಲಾಯಿತು. ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನ ದೊರೆಯುವಂತಾಯಿತು. ‘ಪುರಸಭೆ’ಗಳನ್ನು ಕುರಿತು ಹೊಸ ಸೇರ್ಪಡೆ ಮಾಡಲಾಯಿತು. ಆ ಬಳಿಕ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ನೇರ ಚುನಾವಣೆ ಸಾಧ್ಯವಾಯಿತು.
86ನೇ ತಿದ್ದುಪಡಿ (2002): 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ನೀಡುವ ಹೊಸ ವಿಧಿ ಸೇರ್ಪಡೆಯಾಯಿತು. ಇದು ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಲು ಅನುವು ಮಾಡಿಕೊಡುತ್ತದೆ.
101ನೇ ತಿದ್ದುಪಡಿ (2016): 69-ಎ, 279-ಎ ವಿಧಿಗಳ ಮೂಲಕ ಸರಕು, ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ತರಲಾಗಿದೆ.
102ನೇ ತಿದ್ದುಪಡಿ (2018): ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವನ್ನು ಸ್ಥಾಪಿಸಿ ಅದಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿತು. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ದೂರುಗಳು ಮತ್ತು ಕಲ್ಯಾಣ ಕ್ರಮಗಳನ್ನು ಪರಿಶೀಲಿಸುವ ಅಧಿಕಾರವನ್ನು ಆಯೋಗಕ್ಕೆ ನೀಡಲಾಗಿದೆ.
103ನೇ ತಿದ್ದುಪಡಿ (2019): ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ (ಇಡಬ್ಲ್ಯೂಎಸ್) ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಶೇ 10ರಷ್ಟು ಮೀಸಲಾತಿಯನ್ನು ಈ ತಿದ್ದುಪಡಿ ಮೂಲಕ ಒದಗಿಸಲಾಯಿತು. 1988ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಮತದಾನದ ವಯಸ್ಸನ್ನು 18 ವರ್ಷಕ್ಕೆ ಇಳಿಸಲಾಯಿತು. 61ನೇ ತಿದ್ದುಪಡಿಯ ಮೂಲಕ ಈ ಬದಲಾವಣೆ ತರಲಾಯಿತು. ಇದಕ್ಕೂ ಮೊದಲು ಮತದಾನ ಮಾಡಲು ಇದ್ದ ವಯೋಮಿತಿ 21 ವರ್ಷಗಳು. ಇದರಿಂದಾಗಿ ಹೊಸತಲೆಮಾರಿನ ಜನರಿಗೆ ತಮ್ಮ ನಾಯಕನನ್ನು ಆಯ್ಕೆ ಮಾಡುವುದು ಸಾಧ್ಯವಾಯಿತು.