ನವದೆಹಲಿ: ಪ್ರಸಿದ್ಧ ಇ ಕಾಮರ್ಸ್ ಉದ್ಯಮ ಅಮೆಜಾನ್ ಇಂಡಿಯಾ ಕಂಪನಿ ತನ್ನ ಗ್ರಾಹಕ ಸೇವಾ ವಿಭಾಗದಲ್ಲಿ ಸುಮಾರು 20 ಸಾವಿರ ತಾತ್ಕಾಲಿಕ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಎಂದು ಭಾನುವಾರ ಸ್ಪಷ್ಟಪಡಿಸಿದೆ.
ಮುಂದಿನ ಆರು ತಿಂಗಳಲ್ಲಿ ಗ್ರಾಹಕ ಸೇವೆಗೆ ಹೆಚ್ಚಿನ ಬೇಡಿಕೆ ಬರಲಿದ್ದು, ಇವುಗಳಿಗೆ ತಾತ್ಕಾಲಿಕ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಹೈದರಾಬಾದ್, ಪುಣೆ, ನೋಯ್ಡಾ, ಕೊಯಮತ್ತೂರು, ಕೋಲ್ಕತ್ತಾ, ಮಂಗಳೂರು, ಇಂಧೋರ್, ಭೋಪಾಲ್, ಲಖನೌಗಳಲ್ಲಿ ಈ ನೇಮಕಾತಿ ನಡೆಯಲಿದೆ.
ಇದರಲ್ಲಿ ಅತಿ ಹೆಚ್ಚು ನೇಮಕಾತಿಗಳು ವರ್ಚುವಲ್ ಕಸ್ಟಮರ್ ಕೇರ್ ವಿಭಾಗದಲ್ಲಿ ನಡೆಯಲಿದ್ದು, ವರ್ಕ್ ಫ್ರಂ ಹೋಮ್ ಆಯ್ಕೆಯನ್ನೂ ಹೊಂದಿರುತ್ತವೆ ಎಂದು ಅಮೆಜಾನ್ ಇಂಡಿಯಾ ಉಲ್ಲೇಖಿಸಿದೆ.
ಇ-ಮೇಲ್, ಚಾಟ್, ಸೋಷಿಯಲ್ ಮೀಡಿಯಾ, ಫೋನ್ ಮೂಲಕ ಗ್ರಾಹಕ ಸೇವೆಯನ್ನು ಒದಗಿಸಲಾಗುತ್ತದೆ. ಕನಿಷ್ಠ ಪಿಯುಸಿ ವಿದ್ಯಾಹರ್ತೆಯುಳ್ಳ ಇಂಗ್ಲಿಷ್, ಕನ್ನಡ, ಹಿಂದಿ, ತಮಿಳು, ತೆಲುಗು ಭಾಷಗಳಲ್ಲಿ ಹಿಡಿತ ಹೊಂದಿರುವವರನ್ನು ನೇಮಿಸಿಕೊಳ್ಳಲಾಗುತ್ತದೆ.
ಉದ್ಯೋಗಿಗಳ ಸಾಮರ್ಥ್ಯ ಹಾಗೂ ದಕ್ಷತೆಯನ್ನು ಆಧರಿಸಿ ತಾತ್ಕಾಲಿಕವಾದ ಅವರ ಹುದ್ದೆಗಳನ್ನು ಕಾಯಂಗೊಳಿಸಲಾಗುತ್ತದೆ. ಗ್ರಾಹಕ ಸೇವೆಗೆ ಹೆಚ್ಚಿನ ಬೇಡಿಕೆ ಇದ್ದು, ಮುಂದಿನ ಆರು ತಿಂಗಳಿಗೆ ಅವರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಅಮೆಜಾನ್ ಇಂಡಿಯಾದ ಗ್ರಾಹಕ ಸೇವಾ ವಿಭಾಗದ ನಿರ್ದೇಶಕ ಅಕ್ಷಯ್ ಪ್ರಭು ಸ್ಪಷ್ಟನೆ ನೀಡಿದ್ದಾರೆ.
ಇದಕ್ಕೂ ಮೊದಲು ದೇಶದಲ್ಲಿ 2025ರ ವೇಳೆಗೆ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡುವುದಾಗಿ ಅಮೆಜಾನ್ ಇಂಡಿಯಾ ಹೇಳಿಕೊಂಡಿತ್ತು. ತಂತ್ರಜ್ಞಾನ, ಮೂಲಸೌಕರ್ಯ ಹಾಗೂ ಲಾಜಿಸ್ಟಿಕ್ ವಿಭಾಗದಲ್ಲಿ ಹೂಡಿಕೆ ಕೂಡಾ ಮಾಡಿತ್ತು. ಈ ಹೂಡಿಕೆಗಳಿಂದ ಏಳು ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡುವುದಾಗಿ ಹೇಳಿಕೊಂಡಿತ್ತು. ಕೊರೊನಾ ವೈರಸ್ ಲಾಕ್ಡೌನ್ನಿಂದ ಆನ್ಲೈನ್ ಶಾಪಿಂಗ್ ಹೆಚ್ಚಾಗಲಿದ್ದು, ಈಗ 20 ಸಾವಿರ ಮಂದಿಯನ್ನು ನೇಮಿಸಿಕೊಳ್ಳಲು ಮುಂದಾಗಿದೆ.