ಚಂಡೀಗಡ (ಪಂಜಾಬ್): ದೆಹಲಿಯ ಟ್ರ್ಯಾಕ್ಟರ್ ಪರೇಡ್ನಲ್ಲಿ ನಡೆದ ಹಿಂಸಾಚಾರವು ಸ್ವೀಕಾರಾರ್ಹವಲ್ಲ ಎಂದು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಕೆಂಪುಕೋಟೆಯಲ್ಲಿ ನಡೆದ ಘಟನೆ ಖಂಡಿಸಿರುವ ಅವರು, ರೈತರು ರಾಷ್ಟ್ರರಾಜಧಾನಿಯಿಂದ ಗಡಿಗೆ ಮರಳುವಂತೆ ಆಗ್ರಹಿಸಿದರು. ದೆಹಲಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಪಂಜಾಬ್ನಲ್ಲಿ ಹೈ ಅಲರ್ಟ್ ಘೋಷಿಸಲಾಯಿತು. ಪೊಲೀಸ್ ಮಹಾ ನಿರ್ದೇಶಕ ದಿನಾರ್ ಗುಪ್ತಾಗೆ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಬೇಕೆಂದು ಅಮರಿಂದರ್ ಸಿಂಗ್ ಸೂಚಿಸಿದರು.
ಪೊಲೀಸರು ಹಾಗೂ ರೈತರ ನಡುವೆ ಒಪ್ಪಂದವಾಗಿದ್ದ ನಿಯಮಗಳನ್ನು ಮೀರಿ ಕೆಲವರು ಹಿಂಸಾಚಾರ ನಡೆಸಿದ್ದಾರೆ. ನಿನ್ನೆ ನಡೆದ ಘಟನೆಯ ಕೆಲ ಸನ್ನಿವೇಶಗಳು ರೈತರ ಶಾಂತಿಯುತ ಪ್ರತಿಭಟನೆಗೆ ಭಂಗ ತಂದಿರುವುದು ದುರದೃಷ್ಟಕರ ಎಂದು ಸಿಎಂ ಸಿಂಗ್ ಬೇಸರ ವ್ಯಕ್ತಪಡಿಸಿದರು.
ದೆಹಲಿ ಗಡಿಗೆ ಮರಳುವ ರೈತರು ಶಾಂತಿಯುತ ಪ್ರತಿಭಟನೆ ನಡೆಸಬೇಕು. ಈ ವೇಳೆ ಎಲ್ಲಾ ಆಯಾಮಗಳಲ್ಲಿಯೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕೆಂದು ಅಮರಿಂದರ್ ಸಿಂಗ್ ಮನವಿ ಮಾಡಿದ್ದಾರೆ.