ಅಮರಾವತಿ: ಅಂಧ್ರ ಪ್ರದೇಶದ ರಾಜಧಾನಿ ವಿಚಾರದ ಕುರಿತು ಟಿಬೇಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾಗೆ ಅಂಧ್ರದ ರೈತರು ಪತ್ರ ಬರೆದಿದ್ದಾರೆ.
ದಲೈ ಲಾಮಾಗೆ ಬರೆದ ಪತ್ರವನ್ನು ರೈತರು ಬಿಡುಗಡೆ ಮಾಡಿದ್ದು, ಪತ್ರದಲ್ಲಿ 'ರಾಷ್ಟ್ರೀಯ ಮಹಿಳಾ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಅಮರಾವತಿಯನ್ನು ಆಂಧ್ರ ಪ್ರದೇಶದ ರಾಜಧಾನಿಯಾಗಿ ಘೋಷಿಸುವುದು ಸಂತೋಷದಾಯಕವಾಗಿದೆ ಎಂದು ನೀವು ಹೇಳಿದ್ದೀರಿ. ಶಾಂತಿ ಇರುವಲ್ಲಿ ಆರ್ಥಿಕತೆ ಬೆಳೆಯುತ್ತದೆ ಎಂದು ತಿಳಿಸಿದ್ರಿ' ಅಂತ 2017ರಲ್ಲಿ ದಲೈ ಲಾಮಾ ಹೇಳಿದ್ದ ಮಾತುಗಳನ್ನು ನೆನಪಿಸಿದ್ದಾರೆ.
ಮೂರು ರಾಜಧಾನಿಗಳ ನಿರ್ಧಾರವನ್ನು ವಿರೋಧಿಸಿ ಕಳೆದ ಆರು ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ನಮ್ಮ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. 2 ಸಾವಿರ ಜನರ ಮೇಲೆ ಇಲ್ಲದ ಆರೋಪ ಹೊರೆಸಿ ಪ್ರಕರಣಗಳು ದಾಖಲಾಗಿವೆ ಎಂದಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಒತ್ತಡ ಮತ್ತು ಮಾನಸಿಕ ಸಮಸ್ಯೆಗಳಿಂದ ಸುಮಾರು 63 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ನಮ್ಮ ಮಕ್ಕಳ ಮದುವೆ ನಿಲ್ಲಿಸಲಾಯಿತು. ಭೂಮಿಯ ಮೌಲ್ಯ ಕೂಡ ಕಡಿಮೆಯಾಗಿದೆ. ಜೀವನೋಪಾಯ ಇಲ್ಲದೆ ನಾವು ವರ್ಷದಿಂದ ಬಳಲುತ್ತಿದ್ದೇವೆ. ದಯವಿಟ್ಟು ನಮ್ಮ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ರಾಜಧಾನಿ ಬಳಿಯ ಗ್ರಾಮಗಳಿಗೆ ಭೇಟಿ ನೀಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.