ರಾಜಸ್ಥಾನ: ರಾಷ್ಟ್ರಾದ್ಯಂತ ಪ್ರಸ್ತುತ ನಡೆಯುತ್ತಿರುವ ಪ್ಲಾಸ್ಟಿಕ್ ಅಭಿಯಾನದ ಮುಂಚೆಯೇ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ವಿರುದ್ಧ ಹೋರಾಟ ಪ್ರಾರಂಭವಾಗಿತ್ತು ಎಂದರೆ ನಂಬಲೇಬೇಕು.
ಅಲ್ವಾರ್ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಸದುದ್ದೇಶದಿಂದ 'ಸ್ವಚ್ಛ ಅಲ್ವಾರ್ ಚಳವಳಿ'ಯನ್ನು ಆರಂಭಿಸಲಾಗಿದ್ದು, ಪ್ರತಿ ಭಾನುವಾರದಂದು ಜಿಲ್ಲೆಯ ಜನರು ಆಯಾ ಬೀದಿ, ಗ್ರಾಮ, ವಠಾರ, ನಗರಗಳಲ್ಲಿ ಸೇರಿ ಪ್ಲಾಸ್ಟಿಕ್ ಸೇರಿದಂತೆ ಇತರ ತ್ಯಾಜ್ಯಗಳ ಸಂಗ್ರಹದಲ್ಲಿ ತೊಡಗುತ್ತಾರೆ.
ಕಳೆದ 5 ವರ್ಷಗಳ ಹಿಂದೆ ಸ್ಥಾಪಿತವಾದ ಅಲ್ವಾರ್ ಜಿಲ್ಲೆಯ ಯುವ ಸ್ವಯಂ ಸೇವಕರನ್ನೊಳಗೊಂಡ 'ಹೆಲ್ಪಿಂಗ್ ಹ್ಯಾಂಡ್' ಎಂಬ ಸಂಸ್ಥೆಯು ಈ ಸ್ವಚ್ಛತಾ ಚಳುವಳಿಯನ್ನು ಪ್ರಾರಂಭ ಮಾಡಿದೆ. ಅಂದಿನಿಂದ ಇಂದಿನ ವರೆಗೂ ಪಟ್ಟುಹಿಡಿದು 106 ವಾರಗಳ ಕಾಲ ಜಿಲ್ಲೆಯನ್ನು ಸ್ವಚ್ಛವಾಗಿಡಲು ಸೇವೆ ಸಲ್ಲಿಸಿದ್ದಾರೆ.
ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿರುವ 'ಹೆಲ್ಪಿಂಗ್ ಹ್ಯಾಂಡ್'ನ ಸ್ವಯಂ ಸೇವಕ ವಿಮಲ್, ನಮ್ಮ ಗ್ರಾಮ ಮತ್ತು ನಗರಗಳನ್ನ ಸ್ವಚ್ಛವಾಗಿರಿಸಿ ಸುಂದರವಾಗಿಸಬೇಕೆಂದು ನಾವು ಬಯಸಿದದ್ದೆವು. ಸಂಬಂಧಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸಾಕಷ್ಟು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಐದು ವರ್ಷಗಳಿಂದಲೂ ಪ್ರತಿ ಭಾನುವಾರ 'ಹೆಲ್ಪಿಂಗ್ ಹ್ಯಾಂಡ್'ನ ಸದಸ್ಯರು ಸಾರ್ವಜನಿಕ ಸ್ಥಳಗಳ ಸುತ್ತ ಸ್ಚಚ್ಛಗೊಳಿಸಲು ಬರುತ್ತೇವೆ. ಈಗ ಇಲ್ಲಿ ಬದಲಾವಣೆಗಳು ಕಾಣುತ್ತಿವೆ ಎಂದು ಸಂತೋಷ ವ್ಯಕ್ತಪಡಿಸಿದರು.
ಇನ್ನೊಂದು ವಿಷಯ ಅಂದರೆ ತ್ಯಾಜ್ಯ ಸಂಗ್ರಹಿಸಲು ಬೇಕಾದ ಸಲಕರಣೆಗಳನ್ನು ಖರೀದಿಸಲು ತಂಡದ ಸದಸ್ಯರೇ ಹಣ ನೀಡಿದ್ದಾರೆ. ಅಲ್ಲದೇ ಸಂಗ್ರಹಿಸುವ ತ್ಯಾಜ್ಯಗಳನ್ನು ವಿಂಗಡಣೆ ಮಾಡಿ ಪುರಸಭೆ ನಿಗಮಗಳಿಗೆ ತಲುಪಿಸುವ ಜವಾಬ್ದಾರಿಯನ್ನೂ ಇವರದ್ದಾಗಿದೆ.
ಒಟ್ಟಾರೆಯಾಗಿ ಏಕ-ಬಳಕೆಯ ಪ್ಲಾಸ್ಟಿಕ್‌ಗಳನ್ನು ತೊಡೆದುಹಾಕಲು ಅಲ್ವಾರ್ ಅಭಿಯಾನವು ಸಕಾರಾತ್ಮಕ ಮಾರ್ಗವಾಗಿದೆ.