ನವದೆಹಲಿ: ನಿನ್ನೆ ಬಾಲಿವುಡ್ ನಟ ಅಕ್ಷಯ್ಗೆ ಅಮೂಲ್ಯವಾದ ದಿನ ಎಂದರೆ ತಪ್ಪಾಗಲ್ಲ. ಯಾಕಂದ್ರೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅವರ ಬದುಕಿನ ಇಂಟ್ರಸ್ಟಿಂಗ್ ವಿಚಾರಗಳ ಬಗ್ಗೆ ಮೆಲುಕು ಹಾಕುವ ಅವಕಾಶ ದೊರಕಿತ್ತು.
ಹಲವಾರು ರೋಚಕ ಪ್ರಶ್ನೆಗಳ ಮಧ್ಯೆ ಅಕ್ಷಯ್, ನೀವು ಟ್ವಿಟ್ಟರ್ ಖಾತೆಯನ್ನು ಹೆಚ್ಚು ಬಳಸುತ್ತೀರೋ?, ಅದರಲ್ಲಾಗುವ ಸಂವಾದಗಳನ್ನು ಗಮನಿಸುತ್ತೀರೋ ಎಂದು ಮೋದಿ ಅವರನ್ನ ಕೇಳಿದರು. ಅದಕ್ಕೆ ಮುಗುಳು ನಗುತ್ತಲೇ ಉತ್ತರಿಸಿದ ಅವರು, ನಾನು ನಿಮ್ಮ ಹಾಗೂ ಟ್ವಿಂಕಲ್ ಅವರ ಟ್ವಿಟರ್ ಖಾತೆಯನ್ನು ನೋಡುತ್ತಿರುತ್ತೇನೆ. ಕೆಲವೊಮ್ಮೆಯಂತೂ ಟ್ವಿಂಕಲ್ ಟ್ವಿಟ್ಟರ್ನಲ್ಲೇ ನನ್ನ ಮೇಲೆ ಕೋಪ ತೀರಿಸಿಕೊಂಡಂತೆ ಕಾಣಿಸುತ್ತದೆ. ಇದರಿಂದಾಗಿ ನಿಮ್ಮ ಕುಟುಂಬದಲ್ಲಿ ಶಾಂತಿಯಿರಬಹುದು. ಈ ಕಾರಣಕ್ಕಾದರೂ ನಾನು ನಿಮಗೆ ಉಪಯೋಗವಾಗಿದ್ದೇನೆ ಎಂದರು.
ಹಿಂದುಸ್ಥಾನ್ ಟೈಮ್ಸ್ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ ಅಕ್ಷಯ್, ಮೋದಿಯವರ ಆ ಮೂತುಗಳನ್ನು ಕೇಳಿ ಏನು ಹೇಳಲೆಂದು ತಿಳಿಯಲಿಲ್ಲ. ಆ ಕ್ಷಣಕ್ಕೆ ಯಾವ ಕಡೆ ನೋಡಬೇಕೋ ಗೊತ್ತಾಗಲಿಲ್ಲ. ಒಂದೆಡೆ ದೇಶದ ಪ್ರಧಾನ ಮಂತ್ರಿ ಮತ್ತೊಂದೆಡೆ ಹೆಂಡತಿ, ಇಬ್ಬರಿಗೂ ನನ್ನ ಜೀವನದಲ್ಲಿ ಉನ್ನತ ಸ್ಥಾನವಿದೆ. ಹೀಗಾಗಿ ಮೌನವೇ ಆ ಸಂದರ್ಭಕ್ಕೆ ಸೂಕ್ತ ಉತ್ತರ ಎನಿಸಿತು ಎಂದರು.