ನವದೆಹಲಿ: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಶ್ವಾಸಕೋಶ ತಜ್ಞ ಕೊರೊನಾದಿಂದ ಸಾವಿಗೀಡಾಗಿದ್ದಾರೆ.
ಡಾ.ಜಿತೇಂದ್ರ ನಾಥ್ ಪಾಂಡೆ (78) ಮೃತರು. ಇವರು ಪ್ರಧಾನ ವೈದ್ಯಕೀಯ ಸಂಸ್ಥೆಯಲ್ಲಿ ಶ್ವಾಸಕೋಶ ಶಾಸ್ತ್ರ ವಿಭಾಗದ ನಿರ್ದೇಶಕರು ಮತ್ತು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಈಗ ಇವರೇ ಈ ಸೋಂಕಿಗೆ ಬಲಿಯಾಗಿದ್ದಾರೆ.
ಏಮ್ಸ್ ವೈದ್ಯಕೀಯ ಅಧೀಕ್ಷಕ ಕಚೇರಿ ಈ ವೈದ್ಯರ ಸಾವನ್ನು ದೃಢಪಡಿಸಿದೆ. ಇವರ ಪತ್ನಿಗೂ ಸಹ ಕೊರೊನಾ ಲಕ್ಷಣ ಇದ್ದು, ತಜ್ಞ ವೈದ್ಯರ ಆರೈಕೆಯಲ್ಲಿದ್ದಾರೆ.
ಏಮ್ಸ್ ನಿರ್ಮಾಣದಲ್ಲಿ ಡಾ. ಪಾಂಡೆ ಅವರ ಕೊಡುಗೆ ಅನನ್ಯವಾದದ್ದು . ಶ್ವಾಸಕೋಶ ಶಾಸ್ತ್ರ ವಿಭಾಗವನ್ನು ಆರಂಭಿಸಿದರು ಹಾಗೂ ಈ ವಿಭಾಗದಲ್ಲೇ ಮುಖ್ಯಸ್ಥರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದಾರೆ.