ಜೈಪುರ : ಪಕ್ಷದ ವಿರುದ್ಧ ಬಂಡಾಯವೆದ್ದು ಕೆಲ ಸಮಯ ಕಾಂಗ್ರೆಸ್ ನಾಯಕರಿಗೆ ತಲೆನೋವು ತರಿಸಿದ್ದ ಸಚಿನ್ ಪೈಲಟ್, ಬಂಡಾಯ ಶಮನದ ಬಳಿಕ ಮೊದಲ ಬಾರಿಗೆ ಇಂದು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಪಕ್ಷ (ಆರ್ಪಿಸಿಸಿ)ದ ಪ್ರಧಾನ ಕಚೇರಿಗೆ ಭೇಟಿ ನೀಡಲಿದ್ದು, ರಾಜೀವ್ ಗಾಂಧಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಅಜಯ್ ಮಾಕೆನ್, ಪೈಲಟ್ ಅವರನ್ನು ಅಭಿನಂದಿಸಿ ಈಗಾಗಲೇ ಡಿಜಿಟಲ್ ಬ್ಯಾನರ್ ಮತ್ತು ಫ್ಲೆಕ್ಸ್‌ಗಳನ್ನು ಪ್ರಧಾನ ಕಚೇರಿಯ ಹೊರಗೆ ಹಾಕಿದ್ದಾರೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಮುಖ್ಯಸ್ಥ ಗೋವಿಂದ್ ದೋಸ್ತಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬಂಡಾಯ ಶಮನದ ಬಳಿಕ ಮೊದಲ ಬಾರಿಗೆ ಬುಧವಾರ ಜೈಪುರ ಮತ್ತು ಅವರ ವಿಧಾನಸಭಾ ಕ್ಷೇತ್ರ ಟೊಂಕ್ಗೆ ಸಿಎಂ ಗೆಹ್ಲೋಟ್ ಜೊತೆ ಪೈಲಟ್ ಭೇಡಿ ನೀಡಿದ್ದರು. ಈ ವೇಳೆ, ಅವರಿಗೆ ಕ್ಷೇತ್ರದಲ್ಲಿ ಅದ್ದೂರಿ ಸ್ವಾಗತ ದೊರಕಿತ್ತು. ಇದಕ್ಕೂ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ್ದ ಪೈಲಟ್, ತನ್ನ ಬಳಗದಲ್ಲಿ ಗುರುತಿಸಿಕೊಂಡಿದ್ದ ಶಾಸಕರಿಗೆ ಪಕ್ಷ ಮತ್ತು ಸರ್ಕಾರದಲ್ಲಿ ಅರ್ಹತೆ ಮತ್ತು ಹಿರಿತನದ ಆಧಾರದ ಮೇಲೆ ಸ್ಥಾನ ನೀಡಬೇಕು. ಸರ್ಕಾರದಲ್ಲಿ ಯಾರೂ ಕೆಲಸ ಮಾಡುತ್ತಾರೆ ಪಕ್ಷದಲ್ಲಿ ಯಾರೂ ಕೆಲಸ ಮಾಡುತ್ತಾರೆ ಎಂಬುವುದನ್ನು ಪಕ್ಷ ನಿರ್ಧರಿಸುತ್ತದೆ ಎಂದು ಹೇಳಿದ್ದರು.