ನವದೆಹಲಿ: ರಫೇಲ್ ಜೆಟ್ ಫೈಟರ್ಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾದ ಬೆನ್ನಲ್ಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಫ್ರಾನ್ಸ್ನ ರಕ್ಷಣಾ ಸಚಿವೆ ಫ್ಲೋರೆನ್ಸ್ ಪಾರ್ಲಿ ಅವರೊಂದಿಗೆ ಸಭೆ ನಡೆಸಿದರು.
ನವದೆಹಲಿಯ ಹೈದರಾಬಾದ್ ಹೌಸ್ ಕಟ್ಟಡದಲ್ಲಿ ಸಭೆ ನಡೆದಿದ್ದು, ಕೆಲವೊಂದು ಮಹತ್ತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಇದಕ್ಕೂ ಮೊದಲು ಫ್ರಾನ್ಸ್ನ ರಕ್ಷಣಾ ಸಚಿವೆ ಫ್ಲೋರೆನ್ಸ್ ಪಾರ್ಲಿ ಅಂಬಾಲಾದಲ್ಲಿ ರಫೇಲ್ ಯುದ್ಧ ವಿಮಾನವನ್ನು ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆ ಮಾಡುವ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಇವರ ಜೊತೆಗೆ ಭಾರತದ ವಾಯುಪಡೆಯ ಉನ್ನತಾಧಿಕಾರಿಗಳ ಸಮಕ್ಷಮದಲ್ಲಿ ರಫೇಲ್ ವಿಮಾನಗಳಿಗೆ ಸಾಂಪ್ರದಾಯಿಕ ಜಲ ಫಿರಂಗಿ ವಂದನೆ ಸಲ್ಲಿಸುವ ಮೂಲಕ 17 ಸ್ಕ್ವಾಡ್ರನ್‌ಗೆ ವಿಧ್ಯುಕ್ತವಾಗಿ ಸೇರ್ಪಡೆಗೊಳಿಸಲಾಯಿತು.
ಮುಂದಿನ ದಿನಗಳಲ್ಲಿ ಭಾರತಕ್ಕೆ ಎರಡನೇ ಬ್ಯಾಚ್ನಲ್ಲಿ ಬರಬೇಕಾದ ರಫೇಲ್ ಯುದ್ಧ ವಿಮಾನಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. 2021ರಲ್ಲಿ ಉಳಿದ ರಫೇಲ್ ಫೈಟರ್ ಜೆಟ್ಗಳು ಭಾರತಕ್ಕೆ ಬರಲಿವೆ ಎಂದು ಹೇಳಲಾಗುತ್ತಿದೆ.
ಭಾರತ, ಚೀನಾ ಗಡಿ ಸಮಸ್ಯೆ ಹೆಚ್ಚಾಗುತ್ತಿರುವ ಈ ವೇಳೆ ಫ್ರಾನ್ಸ್ ಸಚಿವರ ಜೊತೆಗಿನ ಈ ಮಾತುಕತೆ ಅತ್ಯಂತ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.