ನವದೆಹಲಿ: ಮಧ್ಯಪ್ರದೇಶದಲ್ಲಿರುವ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ಶಾಸಕರಾದ ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ 17 ಶಾಸಕರು ಕಾಂಗ್ರೆಸ್ ಸಂಪರ್ಕವನ್ನು ಕಳೆದುಕೊಂಡಿದ್ದು, ಸರ್ಕಾರ ಪತನದ ಹಂತದಲ್ಲಿದೆ ಎಂಬುದು ಒಂದೆಡೆಯಾದರೆ, ಮಧ್ಯಪ್ರದೇಶದ ಸ್ಥಿತಿ ನಮ್ಮ ರಾಜ್ಯಕ್ಕೂ ಬರಲಿದೆಯೇ ಎಂಬುದು ರಾಜಸ್ಥಾನಿ ಕಾಂಗ್ರೆಸ್ ನಾಯಕರ ಚಿಂತೆಯಾಗಿದೆ.
ಮಧ್ಯಪ್ರದೇಶದ ಈ ಎಲ್ಲಾ ಅಧ್ವಾನಗಳನ್ನು ಗಮನಿಸುತ್ತಿರುವ ರಾಜಸ್ಥಾನಿಗರು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ರ ನಡುವಿನ ವೈಮನಸ್ಸಿನಿಂದಾಗಿ ಬಿಜೆಪಿ ಲಾಭ ಪಡೆದು, ಮುಂದಿನ ದಿನಗಳಲ್ಲಿ ಮಧ್ಯಪ್ರದೇಶದ ರಾಜಕೀಯ ಸ್ಥಿತಿ ಇಲ್ಲಿಯೂ ಬಂದೊದಗಬಹುದೇ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಿನ ಬೆಳವಣಿಗೆಯ ಪ್ರಕಾರ ಸಿಎಂ ಅಶೋಕ್ ಗೆಹ್ಲೋಟ್, ರಾಜ್ಯಸಭೆಯ ಒಂದು ಸ್ಥಾನವನ್ನು ಖ್ಯಾತ ಉದ್ಯಮಿ ಆಗಿರುವ ರಾಜೀವ್ ಅರೋರಾಗೆ ನೀಡುವಂತೆ ಸಲಹೆ ನೀಡಿದ್ದರು. ಆದರೆ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯಸಭೆಗೆ ಉದ್ಯಮಿಗಳನ್ನು ಕಳುಹಿಸಿದರೆ ಜನರಿಗೆ ತಪ್ಪಾದ ಸಂದೇಶವನ್ನು ನೀಡಿದಂತಾಗುತ್ತದೆ ಎಂದು ಅಡ್ಡಗಾಲು ಹಾಕಿದ್ದರು.
ಪೈಲಟ್, ಕೇವಲ ಈ ವಿಷಯಕ್ಕೆ ಮಾತ್ರವಲ್ಲದೆ ಕೋಟಾ ಸರ್ಕಾರಿ ಆಸ್ಪತ್ರೆಯಲ್ಲಿನ ಮಕ್ಕಳ ಸಾವಿನ ಸಂಗತಿ ಸೇರಿದಂತೆ ಇನ್ನಿತರ ಹಲವು ವಿಷಯಗಳಿಗೆ ಇಬ್ಬರ ನಡುವೆ ತೀವ್ರ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜಸ್ಥಾನ ಒಟ್ಟು 200 ಕ್ಷೇತ್ರಗಳನ್ನೊಳಗೊಂಡಿದ್ದು, ಸಿಪಿಎಂ ಪಕ್ಷದ ಮೂವರು ಶಾಸಕರು, ಆರ್ಎಲ್ಡಿಯ ಓರ್ವ ಶಾಸಕ ಹಾಗೂ ಬಿಎಸ್ಪಿಯ ರೆಬೆಲ್ ಶಾಸಕರನ್ನೊಳಗೊಂಡು 112 ಸ್ಥಾನ ಗಳಿಸಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿತ್ತು. ಆದರೆ ನಂತರದ ದಿನಗಳಲ್ಲಿ ಉಂಟಾದ ಪಕ್ಷದಲ್ಲಿನ ಆಂತರಿಕ ಕಲಹ ಹಾಗೂ ನಾಯಕರ ನಡುವಿನ ಭಿನ್ನಾಭಿಪ್ರಾಯದಿಂದ ಸರ್ಕಾರದಲ್ಲಿ ಕೊಂಚ ಮಟ್ಟಿನ ಒಡಕು ಕಾಣಿಸಿಕೊಂಡಿದೆ. ಇಬ್ಬರ ಜಗಳ ಮೂರನೇಯವನಿಗೆ ಲಾಭ ಎಂಬಂತೆ, ಪಕ್ಷದ ಆಂತರಿಕ ಕಲಹದ ಸದುಪಯೋಗವನ್ನು ಬಿಜೆಪಿ ಪಡೆದುಕೊಳ್ಳಲಿದೆಯಾ ಎಂಬ ಆತಂಕ ಕಾಂಗ್ರೆಸ್ಗೆ ಉಂಟಾಗಿದೆ.
ಈ ಹಿಂದೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 80 ಸ್ಥಾನಗಳನ್ನು ಗಳಿಸಿದೆ, ಒಂದುವೇಳೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳ 20 ಶಾಸಕರು ಕಮಲದ ತೆಕ್ಕೆಗೆ ಬಿದ್ದರೆ ರಾಜಸ್ಥಾನದ ರಾಜಕೀಯವೇ ಬದಲಾಗಲಿದೆ. ಮಧ್ಯಪ್ರದೇಶದಂತೆ ಇಲ್ಲಿಯೂ ಆದರೆ ನಮ್ಮ ಸರ್ಕಾರ ಇಕ್ಕಟ್ಟನಲ್ಲಿ ಸಿಲುಕಿದಂತಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.