ಡೆಹ್ರಾಡೂನ್ (ಉತ್ತರಾಖಂಡ): ಕಾನ್ಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 8 ಪೊಲೀಸರು ಸಾವನ್ನಪ್ಪಿದ ನಂತರ, ಉತ್ತರಾಖಂಡದ ಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಅಶೋಕ್ ಕುಮಾರ್ ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಯೊಂದನ್ನ ನೀಡಿದ್ದಾರೆ.
"ಯುಪಿಯ ಕಾನ್ಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 8 ಜನ ಪೊಲೀಸರು ಸಾವನ್ನಪ್ಪಿದ ನಂತರ, ಪೊಲೀಸರ ಪ್ರಾಣಹಾನಿ ತಪ್ಪಿಸಲು ಸ್ಥಳೀಯ ಗುಪ್ತಚರ ಜಾಲದ ಮೂಲಕ ಅಗತ್ಯ ಮಾಹಿತಿ ಸಂಗ್ರಹಿಸಿದ ನಂತರ ದಾಳಿ ನಡೆಸಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ" ಎಂದು ಅಶೋಕ್ ಕುಮಾರ್ ಹೇಳಿದರು.
ಕಾನ್ಪುರದ ಸಮೀಪವಿರುವ ಹಳ್ಳಿಯಲ್ಲಿ ವಿಕಾಸ್ ದುಬೆ ಅವರ ಸಹಾಯಕರು ಡಿಎಸ್ಪಿ ಸೇರಿದಂತೆ ಎಂಟು ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದರು. ಜುಲೈ 2 ಮತ್ತು ಜುಲೈ 3 ರ ಮಧ್ಯರಾತ್ರಿ ಚೌಬೆಪುರ ಪೊಲೀಸ್ ಠಾಣೆ ವ್ಯಾಪ್ತಿಯ ದಿಕ್ರು ಗ್ರಾಮದಲ್ಲಿ 60 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ರೌಡಿ - ಶೀಟರ್ ವಿಕಾಸ್ ದುಬೆ ಅವರನ್ನು ಬಂಧಿಸಲು ತೆರಳಿದಾಗ ಈ ಎನ್‌ಕೌಂಟರ್ ನಡೆದಿತ್ತು.
ಉಪ ಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ನಾಲ್ವರು ಕಾನ್‌ಸ್ಟೇಬಲ್‌ಗಳು ಈ ಘಟನೆಯಲ್ಲಿ ಸಾವನ್ನಪ್ಪಿದ್ದರು. ದಾಳಿಯಲ್ಲಿ ಏಳು ಮಂದಿ ಸಾರ್ವಜನಿಕರು ಗಾಯಗೊಂಡಿದ್ದರು. ಈ ಎನ್‌ಕೌಂಟರ್ ನಂತರ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಅಪರಾಧಿಗಳನ್ನು ಗುಂಡಿಕ್ಕಿ ಕೊಲ್ಲಲಾಯಿತು.