ನವದೆಹಲಿ: ಏರ್ ಇಂಡಿಯಾ ವಿಮಾನಗಳ ಬುಕ್ಕಿಂಗ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರ ವಿಮಾನ ಸೇವೆ ಪುನರಾರಂಭಿಸುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಂಡ ನಂತರವೇ ಬುಕ್ಕಿಂಗ್ ಪ್ರಾರಂಭಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸಲಹೆ ನೀಡಿದ್ದಾರೆ.
ಮೇ 4ರಿಂದ ಆಯ್ದ ದೇಶೀಯ ವಿಮಾನ ಮತ್ತು ಜೂನ್ 1ರಿಂದ ಆಯ್ದ ಅಂತಾರಾಷ್ಟ್ರೀಯ ವಿಮಾನಗಳ ಬುಕ್ಕಿಂಗ್ ಪ್ರಾರಂಭಿಸಲಾಗಿದೆ ಎಂದು ಏರ್ ಇಂಡಿಯಾ ಶನಿವಾರ ತಿಳಿಸಿತ್ತು. ಆದ್ರೀಗ ನಾವು ಎಲ್ಲಾ ಬುಕ್ಕಿಂಗ್ಗಳನ್ನು ನಿಲ್ಲಿಸಿದ್ದೇವೆ. ಪ್ರಯಾಣಿಕರು ಕಾಯ್ದಿರಿಸಿದ್ದ ಎಲ್ಲಾ ಟಿಕೆಟ್ಗಳನ್ನು ರದ್ದುಪಡಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ಏರ್ ಇಂಡಿಯಾದ ವೆಬ್‌ಸೈಟ್‌ನಲ್ಲಿ ಶನಿವಾರ ಪ್ರಕಟವಾದ ಅಧಿಸೂಚನೆಯಲ್ಲಿ 'ಮೇ 4, 2020ರಿಂದ ಪ್ರಯಾಣಕ್ಕಾಗಿ ಆಯ್ದ ದೇಶೀಯ ವಿಮಾನಗಳಿಗಾಗಿ ಮತ್ತು 2020ರ ಜೂನ್ 1ರಿಂದ ಅಂತಾರಾಷ್ಟ್ರೀಯ ವಿಮಾನಯಾನಕ್ಕಾಗಿ ಬುಕ್ಕಿಂಗ್ ಪ್ರಾರಂಭಿಸಲಾಗಿದೆ' ಎಂದು ತಿಳಿಸಿತ್ತು. ಇದೀಗ ಈ ಅಧಿಸೂಚನೆಯನ್ನು ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ.