ದಂತೇವಾಡ (ಛತ್ತೀಸ್ಗಢ): 74 ನೇ ಸ್ವಾತಂತ್ರ್ಯ ದಿನಾಚರಣೆಯಂದು 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಛತ್ತೀಸ್ಗಢದ ದಂತೇವಾಡ ಜಿಲ್ಲೆಯ ಒಂದು ಪುಟ್ಟ ಹಳ್ಳಿಯೂ ಸಹ ತ್ರಿವರ್ಣವನ್ನು ಹಾರಿಸುವ ಮೂಲಕ ಅಚ್ಚರಿ ಮೂಡಿಸಿದೆ.
ಹಲವಾರು ವರ್ಷಗಳಿಂದ ನಕ್ಸಲರು ಛತ್ತೀಸ್ಗಢದ ಆಂತರಿಕ ಹಳ್ಳಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಿಷ್ಕರಿಸಿದ್ದರು. ಸ್ವಾತಂತ್ರ್ಯೋತ್ಸವದ ಸಂಭ್ರಮದ ಬದಲಿಗೆ ಕಪ್ಪು ಧ್ವಜಗಳನ್ನು ಹಾರಿಸುತ್ತಿದ್ದರು. ಕಟೇಕಲ್ಯಾಣ್ ಬ್ಲಾಕ್‌ನ ಮಾರ್ಜುಮ್ ಗ್ರಾಮವೂ ಸಹ ಇದೇ ಸಾಲಿಗೆ ಸೇರಿದ್ದು.
ಆದಾಗ್ಯೂ, ಈ ವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಮಾರ್ಜುಮ್ ಮತ್ತು ಹತ್ತಿರದ ಪ್ರದೇಶಗಳ ಸುಮಾರು 300 ಗ್ರಾಮಸ್ಥರು ಮಳೆಯ ನಡುವೆಯೂ ಮಹಿಳಾ ಕಮಾಂಡೋಗಳು ಸೇರಿದಂತೆ ಭದ್ರತಾ ಪಡೆಗಳ ಜತೆಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಇದರಲ್ಲಿ ಶರಣಾದ ನಕ್ಸಲರು ಸಹ ಭಾಗವಹಿಸಿದ್ದರು.
ನಕ್ಸಲರನ್ನು ಶರಣಾಗಲು ಮತ್ತು ಮುಖ್ಯವಾಹಿನಿಗೆ ಸೇರಲು ಪ್ರೋತ್ಸಾಹಿಸಲು ಸುಮಾರು 45 ದಿನಗಳ ಹಿಂದೆ, ಛತ್ತೀಸ್ಗಢ ಪೊಲೀಸರು ಜಿಲ್ಲೆಯಲ್ಲಿ ‘ಲೋನ್ ವರಾತು’ (ಮನೆಗೆ ಮರಳುವ) ಅಭಿಯಾನವನ್ನು ಪ್ರಾರಂಭಿಸಿದ್ದರು. ಈ ಅಭಿಯಾನದ ಮೂಲಕ ಪೊಲೀಸರು ಅಪಾರ ಯಶಸ್ಸನ್ನು ಕಂಡಿದ್ದಾರೆ. ಇದುವರೆಗೂ 102 ನಕ್ಸಲರು ಶರಣಾಗಿದ್ದಾರೆ.