ಪುರಿ (ಒಡಿಶಾ): ಪುರಿ ಪಟ್ಟಣದಲ್ಲಿ ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಹಾಗೂ ಹಾಗೂ ದೇವಿ ಸುಭದ್ರಾ ರಥಗಳ ಮೇಲೆ ಅಧರ ಪನಾ ಆಚರಣೆ ನಡೆಯಿತು.
ಈ ಆಚರಣೆಯಲ್ಲಿ ಸಿಹಿ ಪಾನೀಯದಿಂದ ತುಂಬಿದ ಬೃಹತ್ ಮಡಕೆಗಳನ್ನು ಮೂರು ರಥಗಳ ಮೇಲೆ ಸಾಗಿಸಿ ದೇವರಿಗೆ ಅರ್ಪಣೆ ಮಾಡಲಾಗುತ್ತದೆ. ಆಷಾಢ ತಿಂಗಳ 12ನೇ ದಿನದಂದು ಇದನ್ನು ಆಚರಿಸಲಾಗುತ್ತದೆ. ಹಾಲಿನ ಕೆನೆ, ಬೆಣ್ಣೆ, ಸಕ್ಕರೆ, ಬಾಳೆಹಣ್ಣು, ಕರ್ಪೂರ, ಜಾಯಿಕಾಯಿ, ಕರಿಮೆಣಸು ಮತ್ತು ಇತರ ಮಸಾಲೆಗಳ ಮಿಶ್ರಣದಿಂದ ಈ ಪಾನೀಯವನ್ನು ತಯಾರಿಸಲಾಗುತ್ತದೆ.
ಅಧರ ಎಂದರೆ ತುಟಿ ಮತ್ತು ಪನಾ ಎಂದರೆ ಪಾನೀಯ. ದೇಗುಲದ ಸಿಂಹದ್ವಾರದ ಬಳಿ ನಿಲ್ಲಿಸಲಾಗಿರುವ ಪ್ರತಿಯೊಂದು ರಥದ ಮೇಲೆ ಉದ್ದನೆಯ ಮಡಿಕೆಗಳಲ್ಲಿ ಸಿಹಿ ಪಾನೀಯವನ್ನು ಇರಿಸಲಾಗುತ್ತದೆ. ಇವು ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಹಾಗೂ ಹಾಗೂ ದೇವಿ ಸುಭದ್ರಾರ ವಿಗ್ರಹಗಳ ತುಟಿಯ ತನಕ ತಲುಪುತ್ತವೆ.
ಪ್ರತಿ ದೇವತೆಗೆ ಮೂರರಂತೆ ಒಟ್ಟು ಒಂಬತ್ತು ದೊಡ್ಡ ಬ್ಯಾರೆಲ್ ಆಕಾರದ ಮಣ್ಣಿನ ಹೂಜಿಗಳಲ್ಲಿ ಪಾನೀಯವನ್ನು ನೀಡಲಾಗುತ್ತದೆ. ಈ ಹೂಜಿಗಳನ್ನು ತಯಾರಿಸಲು ಮೂರು ಚೀಲ ಮಣ್ಣು ಮತ್ತು ಒಂದು ಚೀಲ ಮರಳನ್ನು ಬಳಸುತ್ತಾರೆ. ಆಚರಣೆಗಾಗಿ ವಿಶೇಷ ಮಣ್ಣಿನ ಮಡಕೆಗಳನ್ನು ರೂಪಿಸಲು ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ.
ರಥ ಪ್ರಯಾಣದ ಬಳಿಕ ದಣಿದ ದೇವತೆಗಳು ಈ ಪಾನೀಯವನ್ನು ಸ್ವೀಕರಿಸಿ ತಮ್ಮ ದೇಹವನ್ನು ತಂಪಗಾಗಿಸುತ್ತಾರೆ ಎಂಬ ನಂಬಿಕೆ ಇದೆ.