ಜಬಲ್ಪುರ (ಮಧ್ಯಪ್ರದೇಶ): ಪೊಲೀಸ್ ಕಸ್ಟಡಿಯಲ್ಲಿಯೇ ಆರೋಪಿಯೊಬ್ಬ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ಐವರು ಪೊಲೀಸ್ ಸಿಬ್ಬಂದಿ ಅಮಾನತುಗೊಳಿಸಲಾಗಿದೆ.
ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಶುಭಮ್ ಬೈರಗಿ (25) ಎಂಬುವವನನ್ನು ಬಂಧಿಸಲಾಗಿತ್ತು. ಆರೋಪಿ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲೂ ಭಾಗಿಯಾಗಿದ್ದ ಎಂಬ ವಿಚಾರವೂ ಬೆಳಕಿಗೆ ಬಂದಿತ್ತು.
ಹೀಗಾಗಿ ತನಿಖೆಗಾಗಿ ಶಸ್ತ್ರಾಸ್ತ್ರಗಳನ್ನಿರಿಸಿದ್ದ ಮನೆಗೆ ಆರೋಪಿಯನ್ನು ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿ ಆತ ಪಿಸ್ತೂಲ್ ಅಡಗಿಸಿಟ್ಟಿದ್ದ ಸ್ಥಳಕ್ಕೆ ಹೋಗಿ ಪಿಸ್ತೂಲ್ ತೆಗೆದುಕೊಂಡು ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ.
ಆರೋಪಿಯನ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ನಿರ್ಲಕ್ಷ್ಯದ ಕಾರಣ ಇಬ್ಬರು ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿ ಅಮಾನತು ಮಾಡಲಾಗಿದ್ದು, ಘಟನೆಯನ್ನ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.
ಮರಣೋತ್ತರ ಪರೀಕ್ಷೆ ನಂತರ ಆರೋಪಿಯ ಶವವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಆದರೆ, ಕುಟುಂಬಸ್ಥರು ಪೊಲೀಸರೇ ಶುಭಮ್ ಬೈರಗಿಯನ್ನ ಕೊಂದಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕೆಂದು ಕೋರಿದ್ದಾರೆ.