ನವದೆಹಲಿ: ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ನಡೆಸಿದ ಸಮೀಕ್ಷೆಯಲ್ಲಿ ಭಾರತದ ಆರೋಗ್ಯ ಸೇತು ಆ್ಯಪ್ಗೆ 5 ರಲ್ಲಿ 2 ಅಂಕ ದೊರೆತಿದ್ದು, ಬಳಕೆದಾರರ ಡೇಟಾವನ್ನು ಸಮಯೋಚಿತವಾಗಿ ಅಳಿಸಿ ಹಾಕುವುದು ಮತ್ತು ಕೇವಲ ಉಪಯುಕ್ತ ದತ್ತಾಂಶಗಳನ್ನು ಮಾತ್ರ ಸಂಗ್ರಹಿಸುವುದನ್ನು ಆಧರಿಸಿ ಈ ಅಂಕಗಳನ್ನು ನೀಡಲಾಗಿದೆ.
ಆರೋಗ್ಯ ಸೇತು ಆ್ಯಪ್ ಈಗಾಗಲೇ 100 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಇತರ 25 ದೇಶಗಳ ಕೋವಿಡ್ ಆ್ಯಪ್ಗಳೊಂದಿಗೆ ಹೋಲಿಕೆ ಮಾಡಿ ಎಂಐಟಿ ಭಾರತದ ಆ್ಯಪ್ಗೆ 2 ಅಂಕ ನೀಡಿದೆ. ಸಂಪರ್ಕ ಪತ್ತೆ ಹಚ್ಚವುದು, ದತ್ತಾಂಶಗಳ ನಿರ್ವಹಣೆ, ಗೌಪ್ಯತೆ ಕಾಪಾಡುವುದು, ಹೇಗೆ ಕಾರ್ಯ ನಿರ್ವಹಿಸುತ್ತದೆ ಮತ್ತು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬ ಅಂಶಗಳನ್ನು ಪರಿಗಣಿಸಿ ಈ ಅಂಕವನ್ನು ನೀಡಲಾಗಿದೆ
ಆರೋಗ್ಯ ಸೇತು ಆ್ಯಪ್, ಬಳಕೆದಾರರ ದತ್ತಾಂಶಗಳನ್ನು ಸಮಯೋಚಿತವಾಗಿ ಅಳಿಸುವುದು ಮತ್ತು ಕೇವಲ ಉಪಯುಕ್ತ ದತ್ತಾಂಶಗಳ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಸ್ವಯಂಪ್ರೇರಿತ ಬಳಕೆ, ದತ್ತಾಂಶ ಬಳಕೆಯ ಮಿತಿಗಳು ಮತ್ತು ಪಾರದರ್ಶಕತೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಎಂಐಟಿ ತಿಳಿಸಿದೆ.
ಇನ್ನು, ಅನೇಕ ದೇಶಗಳ ಅಪ್ಲಿಕೇಶನ್ಗಳು ಸೀಮಿತ ಸೇವೆಗಳನ್ನು ನೀಡುತ್ತಿವೆ. ಅದು ಯಾರಾದರೂ ಕೊರೊನಾ ಸೋಂಕಿತರ ಜೊತೆ ಸಂಪರ್ಕ ಹೊಂದಿದರೆ ಅವರಿಗೆ ಸೂಚನೆಗಳನ್ನು ನೀಡಲು ಬ್ಲೂಟೂತ್ ಅಥವಾ ಜಿಪಿಎಸ್ ಬಳಸುತ್ತದೆ. ಆದರೆ, ಭಾರತದ ಅಪ್ಲಿಕೇಶನ್ ಅವೆಲ್ಲಕ್ಕಿಂತ ಉತ್ತಮವಾಗಿದ್ದು, ಎಲ್ಲಾ ಮಾಹಿತಿಗಳು ಒಂದೇ ಕಡೆ (ಆಲ್-ಇನ್ ಒನ್) ದೊರೆಯುತ್ತವೆ ಎಂದು ಎಂಐಟಿ ಹೇಳಿದೆ.