ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕರೆದ ಸರ್ವಪಕ್ಷ ಸಭೆಗೆ ಎಎಪಿ ಪಕ್ಷವನ್ನು ಆಹ್ವಾನಿಸದಿರುವುದಕ್ಕೆ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತಪ್ಪು ಮಾಹಿತಿ ನೀಡುವ ಮೂಲಕ ದೇಶದ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು.
ಈ ಬಗ್ಗೆ ಸ್ಪಷ್ಟನೆ ಕೇಳಿದ ಸಂಜಯ್ ಸಿಂಗ್, ಸ್ವಾರ್ಥಿ ಸರ್ಕಾರವೊಂದು ದೇಶವನ್ನು ಆಳುತ್ತಿದೆ. ಇದೊಂದು ಅಹಂಕಾರವುಳ್ಳ ಸರ್ಕಾರ. ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷ ಅಧಿಕಾರದಲ್ಲಿದೆ. ಆದರೆ, ಸಂವೇದನಾಶೀಲತೆಯುಳ್ಳ ಕೇಂದ್ರ ಸರ್ಕಾರಕ್ಕೆ ಚೀನಾ-ಭಾರತ ಯೋಧರ ನಡುವೆ ನಡೆದ ಸಂಘರ್ಷ ಬಗ್ಗೆ ಎಎಪಿಯ ಅಭಿಪ್ರಾಯವನ್ನು ಬಯಸುತ್ತಿಲ್ಲ ಎಂದಿದ್ದಾರೆ.
ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ ಸಿಂಗ್, ಕೇಂದ್ರ ಮೊದಲು ಮೂವರು ಸೈನಿಕರು ಹುತಾತ್ಮರಾಗಿದ್ದಾರೆಂದು ಹೇಳಿತು. ನಂತರ 20 ಸೈನಿಕರು ಹುತಾತ್ಮರಾಗಿದ್ದಾರೆ ಎಂದಿತು. ತದ ನಂತರ ಯಾವುದೇ ಸೈನಿಕರು ಚೀನಾ ಸೈನಿಕರ ವಶದಲ್ಲಿಲ್ಲ ಎಂದು ಮಾಹಿತಿ ನೀಡಿತು. ಕೆಲವು ಮಾಧ್ಯಮ ಚೀನಾದ ಸೈನ್ಯವು ಭಾರತದ 10 ಸೈನಿಕರನ್ನು ಬಿಡುಗಡೆ ಮಾಡಿದೆ ಎಂದು ಪ್ರಸಾರ ಮಾಡಿವೆ. ಯಾವುದು ನಿಜ ಯಾವುದು ಸತ್ಯ ಎಂಬುದು ಗೊತ್ತಾಗುತ್ತಿಲ್ಲ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾಕೆ ಇಂತಹ ಗಂಭೀರ ವಿಷಯದ ಬಗ್ಗೆ ಪದೇ ಪದೆ ಸುಳ್ಳು ಹೇಳುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದರು.
ಇಂತಹ ಕಷ್ಟದ ಸಮಯದಲ್ಲಿ ನಾವು ನಮ್ಮ ಸೈನಿಕರೊಂದಿಗೆ ಯಾವುತ್ತೂ ಇರುತ್ತೇವೆ. ಈ ವಿಷಯದಲ್ಲಿ ಯಾರೂ ಯಾವುದೇ ರೀತಿಯ ರಾಜಕೀಯ ಬೇಡ. ನಮ್ಮ ಸೈನಿಕರ ಹುತಾತ್ಮತೆಗಾಗಿ ಭಾರತ ಸರ್ಕಾರವು ಚೀನಾ ದೇಶದ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂಬುದು ನಮ್ಮ ಬೇಡಿಕೆ ಆಗಿದೆ ಎಂದು ಸಿಂಗ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಧಾನ ಮಂತ್ರಿ ಈ ಮೂಲಕ ಚೀನಾಕ್ಕೆ ಸೂಕ್ತ ಉತ್ತರ ನೀಡಬೇಕು. ನಮ್ಮ ಪಕ್ಷ ಈ ದೇಶದ ಪ್ರಧಾನಿ ತೆಗೆದುಕೊಳ್ಳುವ ಪ್ರತಿ ನಿರ್ಧಾರಕ್ಕೂ ಸಾಥ್ ನೀಡುತ್ತದೆ ಎಂದು ಅವರು ಹೇಳಿದರು.
ದೆಹಲಿಯಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದೆ. ಪಂಜಾಬ್ನಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿದೆ. ದೇಶಾದ್ಯಂತ ನಾಲ್ಕು ಸಂಸದರಿದ್ದಾರೆ. ಆದರೆ, ಇಂತಹ ಬಿಕ್ಕಟ್ಟಿನ ಸಮಯದಲ್ಲಿ ನಮ್ಮನ್ನು ಸರ್ವಪಕ್ಷ ಸಭೆಗೆ ಕರೆಯದಿರುವುದು ದುರದೃಷ್ಟಕರ. ಪಕ್ಷ ಇಷ್ಟೆಲ್ಲಾ ಬೆಳೆದು ನಿಂತರೂ ಬಿಜೆಪಿ ನಾಯಕರು ನಮ್ಮನ್ನೇಕೆ ಮುಖ್ಯವೆಂದು ಪರಿಗಣಿಸುತ್ತಿಲ್ಲ ಎಂದು ಎಎಪಿ ಮುಖಂಡ ಪ್ರಶ್ನಿಸಿದ್ದಾರೆ.
ಬಿಕ್ಕಟ್ಟಿನ ಕಾಲದಲ್ಲಿ ಒಗ್ಗಟ್ಟಿನಿಂದ ಮುಂದುವರಿಯುವ ಅವಶ್ಯಕತೆಯಿದೆ. ಕೇಂದ್ರ ಸರ್ಕಾರವು 'ಸಬ್ಕಾ ಸಾಥ್ ಸಬ್ಕಾ ವಿಕಾಸ್' ಎಂದು ಜಪಿಸುತ್ತಿದ್ದರೆ ಸಾಲದು, ಎಲ್ಲರನ್ನೂ ತನ್ನೊಂದಿಗೆ ಕರೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.