ಅನಂತಪುರ(ಆಂಧ್ರಪ್ರದೇಶ): ಅನಂತಪುರಂ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಕದ್ದು ಚಾಲನೆ ಮಾಡಿರುವ ಪ್ರಕರಣವೊಂದು ನಡೆದಿದೆ.
ಧರ್ಮಾವರಂ ಆರ್‌ಟಿಸಿ ಡಿಪೋದಿಂದ ಹಾಡಹಗಲೇ ಚಾಲಾಕಿ ಕಳ್ಳನೋರ್ವ ಬಸ್ನ್ನೇ ಕದ್ದು ಚಾಲನೆ ಮಾಡಿದ್ದಾನೆ. ಡಿಪೋದಿಂದ ಬಸ್ ಅತಿವೇಗವಾಗಿ ಹೋಗುತ್ತಿದ್ದುದನ್ನು ಅಲ್ಲಿನ ಸಿಬ್ಬಂದಿ ಗಮನಿಸಿ ಕೆಲಕಾಲ ಅವಾಕ್ ಆದರು.
ಧರ್ಮಾವರಂ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಚಿನ್ನಕೊತ್ತಪಲ್ಲಿ ಮಾರ್ಗವಾಗಿ ಪೆನುಗೊಂಡದತ್ತ ಹೊರಟಿದ್ದ. ಕೂಡಲೇ ಆರ್‌ಟಿಸಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವಿಷಯ ತಿಳಿದ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೇನರ್‌ವೊಂದನ್ನು ರಸ್ತೆಗೆ ಅಡ್ಡ ನಿಲ್ಲಿಸಿ ಬಸ್ನ್ನು ತಡೆದು ವಶಕ್ಕೆ ಪಡೆದಿದ್ದಾರೆ. ಬಳಿಕ ಖದೀಮನನ್ನು ಸಹ ಕಂಬಿ ಹಿಂದೆ ಕಳಿಸಿದ್ದಾರೆ.
ಬಂಧಿತನನ್ನು ಬೆಂಗಳೂರು ಮೂಲದ ಮಜಮಲ್ ಖಾನ್ ಎಂದು ಗುರುತಿಸಲಾಗಿದೆ. ಧರ್ಮಾವರಂ ಆರ್‌ಟಿಸಿ ಡಿಪೋ ಮ್ಯಾನೇಜರ್ ನೀಡಿರುವ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.