ಕಾನ್ಪುರ (ಉತ್ತರ ಪ್ರದೇಶ): ಸಾಮಾನ್ಯವಾಗಿ ಮಂಗಗಳು ಹಣ್ಣು, ಬಿಸ್ಕತ್ತು ಹೀಗೆ ತಿಂಡಿ-ತಿನಿಸುಗಳಿಗಾಗಿ ನಾನಾ ಕೀಟಲೆ ಮಾಡುವುದುಂಟು. ಆದರೆ ಇಲ್ಲೊಂದು ಕೋತಿ ಮಾತ್ರ ಸದಾ ಗುಂಡಿನ ಮತ್ತಲ್ಲಿ ತೇಲುತ್ತಾ ಸಾರ್ವಜನಿಕರಿಗೆ ಉಪಟಳ ನೀಡುತ್ತದೆ. ಇದರಿಂದಾಗಿ ಈಗ ಜೀವಾವಧಿ ಶಿಕ್ಷೆಗೆ ಗುರಿಯಾಗಿದೆ.
'ಕಲುವಾ' ಹೆಸರಿನ ಈ ಮಂಗ ಮಿರ್ಜಾಪುರ ಜಿಲ್ಲೆಯ ಸ್ಥಳೀಯರೊಬ್ಬರ ಸಾಕು ಕೋತಿ. ಮಿರ್ಜಾಪುರದಲ್ಲಿ 250 ಕ್ಕೂ ಹೆಚ್ಚು ಜನರನ್ನು ಕಚ್ಚಿದೆ. ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ, ಕಲುವಾಗೆ ಅದರ ಮಾಲೀಕ ನಿಯಮಿತವಾಗಿ ಕುಡಿಯಲು ಮದ್ಯವನ್ನು ನೀಡುತ್ತಿದ್ದರು.
ಕಾಲಾನಂತರದಲ್ಲಿ, ಕೋತಿ ಸಹ ಮದ್ಯವ್ಯಸನಿಯಾಯಿತು. ಮಾಲೀಕನು ಸತ್ತ ಬಳಿಕ ಕಲುವಾಗೆ ಮದ್ಯ ಸಿಗುವುದು ವಿರಳವಾಯಿತು. ಇದರಿಂದ ಚಟವನ್ನು ಬಿಡಲಾಗದೇ ಕಲುವಾ ಆಕ್ರಮಣಕಾರಿಯಾದನು. ಮಿರ್ಜಾಪುರದಲ್ಲಿ ಹಲವರ ಮೇಲೆ ದಾಳಿ ಮಾಡಿದ ಈ ಕೋತಿಯನ್ನು ಹಿಡಿಯಲು ಅರಣ್ಯ ಮತ್ತು ಮೃಗಾಲಯದ ತಂಡಗಳು ಹರಸಾಹಸ ಪಟ್ಟವು. ಹಲವಾರು ಪ್ರಯತ್ನಗಳ ನಂತರ, ಕಲುವಾನನ್ನು ಹಿಡಿದು ಕಾನ್ಪುರ್ ಮೃಗಾಲಯಕ್ಕೆ ಕರೆತರಲಾಯಿತು.
'ನಾವು ಅವನನ್ನು ಕೆಲವು ತಿಂಗಳು ಪ್ರತ್ಯೇಕವಾಗಿ ಇಟ್ಟು, ನಂತರ ಮತ್ತೊಂದು ಪಂಜರಕ್ಕೆ ಸ್ಥಳಾಂತರಿಸಿದೆವು. ಅದರ ನಡವಳಿಕೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಮತ್ತು ಅವನು ಮೊದಲಿನಂತೆಯೇ ಆಕ್ರಮಣಕಾರಿಯಾಗಿ ಉಳಿದಿದ್ದಾನೆ. ಅವನನ್ನು ಇಲ್ಲಿಗೆ ಕರೆತಂದು ಮೂರು ವರ್ಷಗಳಾಗಿವೆ. ಕಲುವಾನ ಆಕ್ರಮಣಕಾರಿ ಸ್ವಭಾವ ಬದಲಾಗದ ಹಿನ್ನೆಲೆ ಅದನ್ನು ಜೀವನದುದ್ದಕ್ಕೂ ಸೆರೆಯಲ್ಲಿಯೇ ಇಡಬೇಕೆಂದು ನಿರ್ಧರಿಸಲಾಯಿತು ಎಂದು ಮೃಗಾಲಯದ ವೈದ್ಯ ಮೊಹಮ್ಮದ್ ನಾಸಿರ್ ಹೇಳಿದರು.
ವಿಚಿತ್ರವೆಂದರೆ ಕಲುವಾ ಈವರೆಗೆ ತನ್ನ ಕೇಜ್ ಕೀಪರ್ ಜೊತೆ ಸಹ ಸ್ನೇಹ ಬೆಳೆಸಿಲ್ಲ.