ಧರ್ಮಾಪುರಿ(ತಮಿಳನಾಡು): ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ತಮಿಳುನಾಡಿನಲ್ಲಿ ಹಣದ ವಹಿವಾಟು ಹೆಚ್ಚಾಗಿದೆ. ಇದರ ಮಧ್ಯೆ ಬಸ್ ಕಂಡಕ್ಟರ್ ತಮಗೆ ಸಿಕ್ಕ ಕೋಟ್ಯಂತರ ರೂ. ಹಣವನ್ನು ಚುನಾವಣಾ ಅಧಿಕಾರಿಗಳಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ತಮಿಳುನಾಡಿನ ಧರ್ಮಾಪುರಿ ಜಿಲ್ಲೆಯ ಸರ್ಕಾರಿ ಬಸ್ನಲ್ಲಿ ಅಪರಿಚಿತರು ಬರೋಬ್ಬರಿ 3.47 ಕೋಟಿ ರೂಪಾಯಿ ಬಿಟ್ಟು ಹೋಗಿದ್ದರು.ಒಟ್ಟು 7 ಬ್ಯಾಗ್ಗಳಲ್ಲಿ ಇಷ್ಟೊಂದು ಹಣ ಕಂಡು ಬಂದಿತ್ತು. ಮನಸ್ಸು ಮಾಡಿದ್ರೇ ಆ ಎಲ್ಲ ಹಣವನ್ನ ಬಸ್ ಕಂಡಕ್ಟರ್ ಇರಿಸಿಕೊಳ್ಳಬಹುದಿತ್ತು. ಆದರೆ, ಬಸ್ ಕಂಡಕ್ಟರ್ ಮಾತ್ರ ಹಾಗೆ ಮಾಡಲಿಲ್ಲ. ಅದನ್ನ ತಕ್ಷಣ ಚುನಾವಣಾ ಅಧಿಕಾರಿಗಳನ್ನ ಭೇಟಿ ಮಾಡಿ, ಎಲ್ಲ ಹಣವನ್ನೂ ಹಸ್ತಾಂತರಿಸಿದ್ದಾರೆ. ಆದರೆ, ಈವರೆಗೆ ಯಾರೂ ಹಣ ತಮ್ಮದು ಎಂದು ಮುಂದೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಚುನಾವಣೆ ಘೋಷಣೆಯಾದಾಗಿನಿಂದಲೂ ತಮಿಳುನಾಡಿನಲ್ಲಿ ಸಿಕ್ಕಾಪಟ್ಟೆ ಹಣದ ವಹಿವಾಟು ನಡೆಯುತ್ತಿದ್ದು, ಕಳೆದೆರಡು ದಿನಗಳ ಹಿಂದೆ ಚುನಾವಣಾಧಿಕಾರಿಗಳು ಬರೋಬ್ಬರಿ 10 ಕೋಟಿ ರೂ. ವಶಪಡಿಸಿಕೊಂಡಿದ್ದರು.