ನವದೆಹಲಿ: ಲಾಕ್‌ಡೌನ್ ಅವಧಿಯಲ್ಲಿ ಸಂಚರಿಸುತ್ತಿದ್ದ ವಿಶೇಷ ಶ್ರಮಿಕ್ ರೈಲುಗಳಲ್ಲಿ ಇಲ್ಲಿಯವರೆಗೆ (ಸೆಪ್ಟೆಂಬರ್ 9) ಒಟ್ಟು 97 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.
ರಾಜ್ಯಸಭೆಯಲ್ಲಿ ಶುಕ್ರವಾರ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ'ಬ್ರಿಯೆನ್ ಅವರು, ವಿಶೇಷ ಶ್ರಮಿಕ್ ರೈಲುಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದಾಗಿನಿಂದ ಸಂಭವಿಸಿದ ಒಟ್ಟು ಸಾವಿನ ವಿವರಗಳನ್ನು ಕೇಂದ್ರ ರೈಲ್ವೆ ಸಚಿವಾಲಯವು ಹೊಂದಿದೆಯೇ ಎಂದು ಲಿಖಿತ ರೂಪದಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಕೇಳಿದ್ದರು.
ರಾಜ್ಯ ಪೊಲೀಸರು ಒದಗಿಸಿದ ಮಾಹಿತಿಯ ಆಧಾರದ ಮೇಲೆ, ಪ್ರಸ್ತುತ ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ವಿಶೇಷ ಶ್ರಮಿಕ್ ರೈಲುಗಳಲ್ಲಿ ಪ್ರಯಾಣಿಸುವಾಗ ಸೆಪ್ಟೆಂಬರ್ 9 ರವರೆಗೆ 97 ಜನರು ಸಾವನ್ನಪ್ಪಿದ್ದಾರೆ ಎಂದು ಗೋಯಲ್ ಉತ್ತರಿಸಿದ್ದಾರೆ.
97 ಸಾವಿನ ಪ್ರಕರಣಗಳಲ್ಲಿ 87 ಮೃತದೇಹಗಳನ್ನು ರಾಜ್ಯ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 51 ಮರಣೋತ್ತರ ವರದಿಗಳನ್ನು ಆಯಾ ರಾಜ್ಯ ಪೊಲೀಸರಿಂದ ಈವರೆಗೆ ಪಡೆಯಲಾಗಿದ್ದು, ಇದರಲ್ಲಿ ಸಾವಿಗೆ ಹೃದಯಾಘಾತ ಕಾರಣವೆಂದು ತೋರಿಸಲಾಗಿದೆ. ಹಾಗೆಯೇ, ಹೃದ್ರೋಗ, ಮೆದುಳಿನ ರಕ್ತಸ್ರಾವ, ಮೊದಲೇ ಅಸ್ತಿತ್ವದಲ್ಲಿರುವ ದೀರ್ಘಕಾಲದ ಕಾಯಿಲೆ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ದೀರ್ಘಕಾಲದ ಯಕೃತ್ತಿನ ಕಾಯಿಲೆ, ಇತ್ಯಾದಿಗಳು ಕಾರಣಗಳು ತಿಳಿದುಬಂದಿದೆ ಎಂದಿದ್ದಾರೆ.
ರಾಜ್ಯ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣಗಳಲ್ಲಿ ಸಿ.ಆರ್.ಪಿ.ಸಿ ಯ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸುತ್ತಾರೆ ಮತ್ತು ಮುಂದಿನ ಕಾನೂನು ಪ್ರಕ್ರಿಯೆಯನ್ನು ಅನುಸರಿಸುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.