ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಶೇ. 94ರಷ್ಟು ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಗಗನ ಕುಸುಮವಾಗಿದೆ. ಈ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಫೋನ್ ಅಥವಾ ಇಂಟರ್ನೆಟ್ ಬಳಕೆ ಸಾಧ್ಯವಾಗುತ್ತಿಲ್ಲ ಎಂಬ ಅಚ್ಚರಿಯ ಮಾಹಿತಿ ಸಮೀಕ್ಷೆಯ ವರದಿಯಲ್ಲಿ ಲಭ್ಯವಾಗಿದೆ.
ಮಕ್ಕಳ ಹಕ್ಕುಗಳು ಮತ್ತು ಸಿಆರ್‌ವೈ ಮೇ-ಜೂನ್‌ನಲ್ಲಿ ನಡೆಸಿದ ಅಧ್ಯಯನದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ 5,987 ಮಕ್ಕಳು ಭಾಗವಹಿಸಿದ್ದರು. 11 ರಿಂದ 18 ವರ್ಷದೊಳಗಿನ ಮಕ್ಕಳ ಆನ್‌ಲೈನ್ ಶಿಕ್ಷಣದ ಕುರಿತು ಸಮೀಕ್ಷೆ ನಡೆಸುವುದು ಸಿಆರ್‌ವೈ ಉದ್ದೇಶವಾಗಿತ್ತು.
ಕೊರೊನಾ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಲಾಕ್ಡೌನ್ ಇತ್ತು. ಈ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ತೀರ್ಮಾನಿಸಲಾಗಿತ್ತು. ಈ ನಿಟ್ಟಿನಲ್ಲಿ ಸಿಆರ್‌ವೈ ನಡೆಸಿದ ಸಮೀಕ್ಷೆಯಿಂದ ಅಚ್ಚರಿಯ ಮಾಹಿತಿ ದೊರೆತಿದೆ. ಕರ್ನಾಟಕದಲ್ಲಿ ಶೇ.9 ರಷ್ಟು ವಿದ್ಯಾರ್ಥಿಗಳು, ತಮಿಳುನಾಡಿನಲ್ಲಿ ಶೇ. 3 ವಿದ್ಯಾರ್ಥಿಗಳು ಮಾತ್ರ ಆನ್‌ಲೈನ್ ಶಿಕ್ಷಣದ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಇದೇ ಸಮೀಕ್ಷೆಯಲ್ಲಿ ಮತ್ತೊಂದು ವಿಷಯ ಬಹಿರಂಗಗೊಂಡಿದೆ. ಅದೇನೆಂದರೆ, ಶೇ 95ರಷ್ಟು ಕುಟುಂಬಗಳ ವಾರ್ಷಿಕ ಆದಾಯ ಒಂದು ಲಕ್ಷ ರೂ.ಗಿಂತ ಕಡಿಮೆಯಿದೆ ಅನ್ನೋದು. ಬಡತನದಿಂದ ಮೊಬೈಲ್ ಕೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ತಿಳಿದುಬಂದಿದೆ.
ಶೇ. 6 ರಷ್ಟು ಮಕ್ಕಳು ಸ್ಮಾರ್ಟ್‌ಫೋನ್ ಹೊಂದಿದ್ದರೆ, ಶೇ. 29 ರಷ್ಟು ಮಕ್ಕಳು ತಮ್ಮ ಕುಟುಂಬ ಸದಸ್ಯರ ಫೋನ್ಗಳನ್ನು ಬಳಕೆ ಮಾಡುತ್ತಿದ್ದಾರೆ. ಇದಲ್ಲದೆ, ಸಂದರ್ಶನ ಮಾಡಿದ ಶೇ 55 ರಷ್ಟು ಮಕ್ಕಳು ವಾರದಲ್ಲಿ ಮೂರು ಅಥವಾ ಅದಕ್ಕಿಂತ ಕಡಿಮೆ ದಿನಗಳವರೆಗೆ ಸ್ಮಾರ್ಟ್ಫೋನ್ಗಳಲ್ಲಿ ತರಗತಿಗಳಿಗೆ ಪ್ರವೇಶ ಪಡೆಯುತ್ತಾರಂತೆ.
ಈ ಕುರಿತು ಮಾತನಾಡಿದ ಸಿಆರ್ವೈನ ದಕ್ಷಿಣ ಪ್ರಾದೇಶಿಕ ನಿರ್ದೇಶಕ ಕಾರ್ತಿಕ್ ನಾರಾಯಣನ್, ಸಮಾಜದಲ್ಲಿ ಅತ್ಯಂತ ಹಿಂದುಳಿದ ವರ್ಗದ ಮಕ್ಕಳು ಕೊರೊನಾ ಕಾಲದಲ್ಲಿ ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ. ಮಕ್ಕಳಿಗೆ ರಕ್ಷಣಾತ್ಮಕ ವಾತಾವರಣ ಖಾತ್ರಿಪಡಿಸಿಕೊಳ್ಳಲು ಶಿಕ್ಷಣ ಮುಖ್ಯ. ಶಿಕ್ಷಣದಿಂದ ವಂಚಿತರಾಗುವ ಮಕ್ಕಳು ಬಾಲ್ಯವಿವಾಹ ಅಥವಾ ಬಾಲ ಕಾರ್ಮಿಕ ಪದ್ಧತಿಗೆ ತಳ್ಳಲ್ಪಡುತ್ತಾರೆ. ಪರಿಣಾಮ, ಅವರ ಜೀವನದ ನಿರ್ಣಾಯಕ ಸಮಯ ವ್ಯರ್ಥವಾಗುತ್ತದೆ. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಶಿಕ್ಷಣ ಕಷ್ಟಕರ. ಆದ್ರೆ, ಆನ್‌ಲೈನ್ ಶಿಕ್ಷಣ ಕೆಲವರಿಗೆ ಮಾತ್ರ ಅನುಕೂಲಕರವಾಗ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.