ಸೊಲ್ಲಾಪುರ (ಮಹಾರಾಷ್ಟ್ರ) : ಕರ್ನಾಟಕ ಮೂಲದ 9 ತಿಂಗಳ ಗರ್ಭಿಣಿ ಪುಣೆಯಿಂದ ಸೊಲ್ಲಾಪುರದ ವರೆಗೆ ಕಾಲ್ನಡಿಗೆಯಲ್ಲಿ ಬಂದಿದ್ದಾರೆ. ಇವರು ಕರ್ನಾಟಕದ ಕಲಬುರಗಿಗೆ ಹೋಗಬೇಕಾಗಿದ್ದು, ತನ್ನ ಪತಿಯೊಂದಿಗೆ ಪುಣೆಯಿಂದ ನಡೆದುಕೊಂಡು ಬಂದು ಸೊಲ್ಲಾಪುರವನ್ನು ತಲುಪಿದ್ದಾರೆ.
ಕಲಬುರಗಿ ಮೂಲದ ಶೀಲಾ ಹಾಗೂ ಅವರ ಪತಿ ಪುಣೆಗೆ ಕೆಲಸಕ್ಕೆಂದು ತೆರಳಿದ್ದರು. ಬಳಿಕ ಅಲ್ಲಿಯೇ ನೆಲೆಸಿದ್ದರು. ಗರ್ಭಿಣಿಯಾಗಿದ್ದ ಶೀಲಾ ತೋರಿಸುತ್ತಿದ್ದ ಆಸ್ಪತ್ರೆಯು ಲಾಕ್ಡೌನ್ನಿಂದಾಗಿ ಮುಚ್ಚಲ್ಪಟ್ಟಿತು. ಬೇರೆ ಯಾವುದೇ ಆಸ್ಪತ್ರೆಗೂ ಹೋಗಲಾಗದ ಕಾರಣ ದಂಪತಿ ತಮ್ಮೂರಿಗೆ ಪ್ರಯಾಣಿಸಲು ನಿರ್ಧರಿಸಿದರು. ಇದಕ್ಕಾಗಿ ದಂಪತಿ ಕಾಲ್ನಡಿಗೆಯಲ್ಲಿ ಪುಣೆಯಿಂದ ಸೊಲ್ಲಾಪುರಕ್ಕೆ ನಡೆದುಕೊಂಡು ಬಂದರು. ಇವರು ಕಾಲ್ನಡಿಗೆಯಲ್ಲಿ ದಾರಿ ಸಾಗಿಸುತ್ತಿದ್ದ ದೃಶ್ಯ ಸೊಲ್ಲಾಪುರದ ಛಾಯಾಗ್ರಾಹಕ ಯಶ್ವಂತ್ ಸದುಲ್ ಅವರ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಳಿಕ ಛಾಯಾಗ್ರಾಹಕ ಯಶ್ವಂತ್ ಸದುಲ್ ಸಹಾಯದಿಂದ ಇವರನ್ನು ಸೊಲ್ಲಾಪುರದ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಗೆ ಕರೆದೊಯ್ದು ಬಿಡಲಾಯಿತು. ಮಾರುಕಟ್ಟೆ ಸಮಿತಿಯಿಂದ ಅವರನ್ನು ವಾಹನದ ಮೂಲಕ ಕಲಬುರಗಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.