ಅಯೋಧ್ಯಾ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಭವ್ಯವಾದ ರಾಮ ದೇವಾಲಯ ನಿರ್ಮಿಸಲು ಭೂಮಿ ಪೂಜೆ ಮಾಡಲಿದ್ದು, ಈ ಭೂಮಿ ಪೂಜೆ ಹಲವು ವಿಧಗಳಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ.
ದೇವಾಲಯದ ಅಡಿಪಾಯದಲ್ಲಿ, ಏಳು ಪವಿತ್ರ ನದಿಗಳ ಮಣ್ಣು ಮತ್ತು ಗಂಗಾ, ಯಮುನಾ ಸರಸ್ವತಿಯ ಪವಿತ್ರ ನೀರನ್ನು ಇಡಲಾಗುವುದು. ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಗೆ ದೇಶಾದ್ಯಂತ ಸುಮಾರು 8000 ಪವಿತ್ರ ಸ್ಥಳಗಳ ಮಣ್ಣು ಮತ್ತು ಪವಿತ್ರ ನೀರು ಅಯೋಧ್ಯೆಯನ್ನು ತಲುಪಿದೆ. ಸಾವಿರಾರು ಪವಿತ್ರ ಸ್ಥಳಗಳ ನೀರು ಮತ್ತು ಮಣ್ಣನ್ನು ಬಳಸುವುದು, ದೇಶಾದ್ಯಂತ ಸಾಮಾಜಿಕ ಸಾಮರಸ್ಯದ ಸಂದೇಶವಾಗಲಿದೆ ಎನ್ನಲಾಗುತ್ತಿದೆ.
ಪ್ರಯಾಗರಾಜ್ ಪವಿತ್ರ ಸಂಗಮದ ನೀರು ಮತ್ತು ಮಣ್ಣು, ಕಾಶಿಯ ಸಂತ ರವಿದಾಸ್ ಅವರ ಜನ್ಮಸ್ಥಳ, ಮಹರ್ಷಿ ವಾಲ್ಮೀಕಿ ಆಶ್ರಮ, ಮಹಾರಾಷ್ಟ್ರದ ಗೋದಿಯಾ ಜಿಲ್ಲೆಯ ಕಚಾರ್‌ಗರ್, ಜಾರ್ಖಂಡ್‌ನ ರಾಮ ರೇಖಾ ಧಾಮ, ಡಾ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಜನ್ಮಸ್ಥಳ, ದೆಹಲಿಯ ಜೈನ ದೇವಾಲಯ ಮತ್ತು ರಾಮ ದೇವಾಲಯ ನಿರ್ಮಾಣ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಿವಂಗತ ಅಶೋಕ್ ಸಿಂಘಾಲ್ ಅವರ ನಿವಾಸದ ಮಣ್ಣು ಅಯೋಧ್ಯಾ ತಲುಪಿದೆ.
ಪಶ್ಚಿಮ ಬಂಗಾಳದ ಕಾಳಿ ಘಾಟ್, ದಕ್ಷಿಣೇಶ್ವರ, ಗಂಗಾ ಸಾಗರ್ ಮತ್ತು ಕೂಚ್ ಬೆಹಾರ್‌ನ ಮದನ್ ಮೋಹನ್ ಮಂದಿರ ಮುಂತಾದ ದೇವಾಲಯಗಳ ಪವಿತ್ರ ಮಣ್ಣಿನ ಜೊತೆಗೆ, ಗಂಗಾ ಸಾಗರ, ಭಾಗೀರಥಿ, ಅಯೋಧ್ಯಾ ಧಾಮದಿಂದ ಪವಿತ್ರ ನೀರು ಬಂದಿದೆ. ಬದ್ರಿನಾಥ, ರಾಯಗಡ್ ಕೋಟೆ, ರಂಗನಾಥಸ್ವಾಮಿ ದೇವಸ್ಥಾನ, ಮಹಾಕಾಳೇಶ್ವರ ದೇವಸ್ಥಾನ, ಚಂದ್ರಶೇಖರ್ ಆಜಾದ್ ಮತ್ತು ಬಿರ್ಸಾ ಮುಂಡಾ ಅವರ ಜನ್ಮಸ್ಥಳ ಮತ್ತು ಧಾರ್ಮಿಕ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಅನೇಕ ಪ್ರಸಿದ್ಧ ಸ್ಥಳಗಳ ಮಣ್ಣು ಮತ್ತು ನೀರು ಅಯೋಧ್ಯಾ ತಲುಪಿದೆ.