ರೋಹ್ತಾಸ್ (ಬಿಹಾರ): ರೋಹ್ತಾಸ್ ಜಿಲ್ಲೆಯಲ್ಲಿ ನಿನ್ನೆ 8 ವರ್ಷದ ಬಾಲಕಿ ಮೇಲೆ ಕಾಮುಕನೋರ್ವ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ.
ದೀಪಾವಳಿ ಪೂಜೆಗೆಂದು ಸಂಬಂಧಿಕರನ್ನು ಕರೆಯಲು ಬಾಲಕಿ ಹೋಗಿದ್ದಳು. ಈ ವೇಳೆ ಆರೋಪಿ ಬಲರಾಮ್ ಸಿಂಗ್ ಬಾಲಕಿಗೆ ಆಮಿಷವೊಡ್ಡಿ ಮನೆಗೆ ಕರೆದೊಯ್ದಿದ್ದಾನೆ. ಬಳಿಕ ಅತ್ಯಾಚಾರವೆಸಗಿ ಕೊಲೆ ಮಾಡಿ, ಪೆಟ್ಟಿಗೆಯಲ್ಲಿ ಮೃತದೇಹವನ್ನು ಬಚ್ಚಿಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಸಂಬಂಧಿಕರನ್ನು ಕರೆಯಲು ತೆರಳಿದ್ದ ಹುಡುಗಿ, ಸುಮಾರು ಗಂಟೆ ಕಳೆದರೂ ಮನೆಗೆ ಬಾರದಿದ್ದಕ್ಕೆ ಪೋಷಕರು ಹುಡುಕಲು ಆರಂಭಿಸಿದ್ದಾರೆ. ಹೀಗೆ ಹುಡುಕುತ್ತಾ ಹೋದವರಿಗೆ ಬಾಲಕಿಯ ಶವ ಬಲರಾಮ್ ಸಿಂಗ್ ಮನೆಯಲ್ಲಿರುವ ಪೆಟ್ಟಿಗೆಯೊಂದರಲ್ಲಿ ದೊರೆತಿದೆ.
ಇದರಿಂದ ಕೋಪಗೊಂಡ ಗ್ರಾಮಸ್ಥರು ಆರೋಪಿಗೆ ಧರ್ಮದೇಟು ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ರಕ್ಷಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.