ಮುಂಬೈ(ಮಹಾರಾಷ್ಟ್ರ): ಮುಂಬೈನಲ್ಲಿರುವ ಏಷ್ಯಾದ ಅತಿ ದೊಡ್ಡ ಕೊಳಗೇರಿ ಧಾರಾವಿಯಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಎಲ್ಲಾ ನಿವಾಸಿಗಳಿಗೆ ಉಚಿತವಾಗಿ ಕೊರೊನಾ ಸೋಂಕು ಪತ್ತೆ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ.
ಧಾರಾವಿಯಲ್ಲಿ ಸುಮಾರು 7.5 ಲಕ್ಷ ನಿವಾಸಿಗಳು ವಾಸವಿದ್ದಾರೆ. ಇಲ್ಲಿ ಈಗಾಗಲೇ 14 ಮಂದಿಯಲ್ಲಿ ಸೋಂಕು ಕಾಣಿಸಿದೆ. ಈವರೆಗೂ ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಮುಂಜಾಗ್ರತಾ ಕ್ರಮಕೈಗೊಂಡಿರುವ ಸರ್ಕಾರ ಅಲ್ಲಿನ ನಿವಾಸಿಗಳಿಗೆಲ್ಲರಿಗೂ ಕೊರೊನಾ ಸೋಂಕು ಪತ್ತೆ ಪರೀಕ್ಷೆ ನಡೆಸಲು ಮುಂದಾಗಿದೆ.
ಕೊರೊನಾ ಸೋಂಕು ಪತ್ತೆಗಾಗಿ ಸುಮಾರು 150ಕ್ಕೂ ಹೆಚ್ಚು ಖಾಸಗಿ ವೈದ್ಯರನ್ನು ಬಳಸಿಕೊಳ್ಳಲಿದೆ. 10-12 ದಿನಗಳ ಅವಧಿಯಲ್ಲಿ ಸೋಂಕು ಪತ್ತೆ ಪರೀಕ್ಷೆ ನಡೆಯಲಿದೆ ಎಂದು ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ ಉಪಟಳ ತೀವ್ರವಾಗಿದೆ. ಈಗಾಗಲೇ 1135 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 72 ಮಂದಿ ಸೋಂಕಿನ ಕಾರಣಕ್ಕೆ ಸಾವನ್ನಪ್ಪಿದ್ದಾರೆ.