ತಿರುವನಂತಪುರಂ(ಕೇರಳ): ರಾಜ್ಯದ ಕಾಡುಗಳಲ್ಲಿ ಕಳೆದ ಹತ್ತು ವರ್ಷಗಳಲ್ಲಿ 64 ಕಾಡಾನೆಗಳು ಅಸ್ವಾಭಾವಿಕವಾಗಿ ಸಾವನ್ನಪ್ಪಿವೆ ಎಂದು ಕೇರಳ ಅರಣ್ಯ ಇಲಾಖೆಯ ಅಧಿಕೃತ ದಾಖಲೆಗಳು ತಿಳಿಸಿವೆ.
ಇದು 2010-2011ರಿಂದ 2019-2020ರವರೆಗೆ ಅರಣ್ಯ ಇಲಾಖೆಯಿಂದ ದಾಖಲಾದ ಅಧಿಕೃತ ದತ್ತಾಂಶವಾಗಿದೆ. ಭಾರತದ ಇತರ ರಾಜ್ಯಗಳಲ್ಲಿ ಕಾಡಾನೆಗಳ ಅಸ್ವಾಭಾವಿಕ ಸಾವುಗಳಿಗೆ ಹೋಲಿಸಿದರೆ ಇದು ತುಂಬಾ ಕಡಿಮೆ ಸಂಖ್ಯೆಯಾಗಿದೆ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೇಟೆಯಾಡುವುದು, ವಿದ್ಯುತ್ ಸ್ಪರ್ಶ, ರಸ್ತೆ ಅಪಘಾತ ಮತ್ತು ಸ್ಫೋಟಕಗಳಿಂದ ಉಂಟಾಗುವ ಸಾವುಗಳನ್ನು ಅಸ್ವಾಭಾವಿಕವೆಂದು ಅರಣ್ಯ ಇಲಾಖೆ ಪರಿಗಣಿಸುತ್ತದೆ. ಕಳೆದ ಹತ್ತು ವರ್ಷಗಳಲ್ಲಿ 2015-2016ರಲ್ಲಿ ಅತಿ ಹೆಚ್ಚು ಸಾವುಗಳು ದಾಖಲಾಗಿವೆ. ಮಲಯತ್ತೂರು ಅರಣ್ಯ ವಿಭಾಗದ ಅಡಿಯಲ್ಲಿ ಹದಿನಾಲ್ಕು ಕಾಡಾನೆಗಳ ಸಾವು ದಾಖಲಾಗಿದೆ.
2018-2019ರಲ್ಲಿ ಮಾನವ-ಪ್ರಾಣಿಗಳ ಸಂಘರ್ಷದಿಂದಾಗಿ ಒಟ್ಟು ಹತ್ತು ಆನೆಗಳು ಸಾವಿಗೀಡಾಗಿವೆ. ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ 772 ಕಾಡಾನೆಗಳು ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ. 2017ರಲ್ಲಿ ಕೇರಳದಲ್ಲಿ ನಡೆಸಿದ ವನ್ಯಜೀವಿ ಗಣತಿಯ ಪ್ರಕಾರ, ಕೇರಳದ ಕಾಡುಗಳಲ್ಲಿ 5,706 ಆನೆಗಳಿವೆ.
ಪಾಲಕ್ಕಾಡ್ ಜಿಲ್ಲೆಯಲ್ಲಿ ಗರ್ಭಿಣಿ ಕಾಡಾನೆ ಸಾವು ಉದ್ದೇಶಪೂರ್ವಕವಾಗಿ ನಡೆದಿಲ್ಲ ಎಂದು ಕೇರಳ ಅರಣ್ಯ ಇಲಾಖೆ ಸ್ಪಷ್ಟೀಕರಣ ನೀಡಿದೆ. ಆನೆ ಆಕಸ್ಮಿಕವಾಗಿ ಕಾಡು ಹಂದಿಗಳಿಗೆ ಇರಿಸಿದ್ದ ಪಟಾಕಿ ತುಂಬಿದ ಹಣ್ಣನ್ನು ತಿಂದಿದೆ ಎಂದಿದ್ದಾರೆ.
ಆನೆಯ ದುರಂತ ಸಾವಿನ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಅರಣ್ಯ ಗಡಿಗಳಲ್ಲಿ ಕಣ್ಗಾವಲು ತೀವ್ರಗೊಂಡಿದೆ ಎಂದು ಕೇರಳದ ಅರಣ್ಯ ಮತ್ತು ವನ್ಯಜೀವಿಗಳ ಮುಖ್ಯ ಸಂರಕ್ಷಣಾಧಿಕಾರಿ ಸುರೇಂದ್ರ ಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಅರಣ್ಯ ಗಡಿಯಲ್ಲಿ ವಾಸಿಸುವ ಜನರ ಸಂಪೂರ್ಣ ಸಹಕಾರದೊಂದಿಗೆ ಕೆಲಸ ಮಾಡಲು ಎಲ್ಲಾ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಿರ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.