ಲಖನೌ: ಮಹಾಮಾರಿ ಕೊರೊನಾ ವೈರಸ್ ತಂದಿಟ್ಟ ಫಜೀತಿ ಅಷ್ಟಿಷ್ಟಲ್ಲ. ಎಲ್ಲ ವಲಯಗಳ ಮೇಲೂ ಕರಿಛಾಯೆ ಹರಡಿರುವ ಡೆಡ್ಲಿ ವೈರಸ್ ದಾಳಿಯಿಂದಾಗಿ ಇಡೀ ಮನುಕುಲವೇ ಸಂಕಷ್ಟಕ್ಕೊಳಗಾಗಿದೆ. ಇದರಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಲ್ಲೂ ಭಯ ಶುರುವಾಗಿದೆ.
ಮಹಾಮಾರಿ ಕೊರೊನಾ ವೈರಸ್ ಸೋಂಕಿನ ಭಯದಲ್ಲಿ ಕಳೆದ ಭಾನುವಾರ ನಡೆದ ಯುಪಿಎಸ್ಸಿ (ಕೇಂದ್ರ ಲೋಕಸೇವಾ ಆಯೋಗದ) ಪೂರ್ವಭಾವಿ ಪರೀಕ್ಷೆಯಲ್ಲಿ ಶೇ.50ರಷ್ಟು ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ.
ಉತ್ತರ ಪ್ರದೇಶದ ಲಖನೌದಲ್ಲಿ ನಡೆದ ಯುಪಿಎಸ್ಸಿ ಪರೀಕ್ಷೆಯಲ್ಲಿ ಶೇ.50ರಷ್ಟು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ 43,921 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ತಮ್ಮ ಹೆಸರು ನೋಂದಾಯಿಸಿದ್ದರು. ಆದರೆ 21,790 ಅಭ್ಯರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದಾರೆ. ಉಳಿದಂತೆ 21,607 ವಿದ್ಯಾರ್ಥಿಗಳು ಪರೀಕ್ಷೆಯಿಂದ ಗೈರಾಗಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರ ಉಳಿದುಕೊಳ್ಳಲು ಮುಖ್ಯ ಕಾರಣ ಕೋವಿಡ್ ಎಂದು ಹೇಳಲಾಗುತ್ತಿದೆ.