ವಿಶಾಖಪಟ್ಟಣಂ ( ಆಂಧ್ರಪ್ರದೇಶ ) : ಇಲ್ಲಿನ ಪರವಾಡದ ಜೆಎನ್ ಫಾರ್ಮಾ ಸಿಟಿಯ ಔಷಧ ಕಂಪನಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದ ತನಿಖೆಗಾಗಿ ಜಿಲ್ಲಾಧಿಕಾರಿ ವಿನಯ್ ಚಂದ್ ನೇಮಕ ಮಾಡಿದ್ದ ಐವರು ಸದಸ್ಯರ ಸಮಿತಿ ಮಂಗಳವಾರ ಸಂಜೆ ತನ್ನ ಪ್ರಾಥಮಿಕ ವರದಿ ಸಲ್ಲಿಸಿದೆ.
ಸಮಿತಿ ಸ್ಥಳ ಪರಿಶೀಲನೆ ನಡೆಸಿ ತನ್ನ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದೆ. ವರದಿಯ ಪ್ರಕಾರ, ರಾಮ್‌ಕಿ ಸಿಇಟಿಪಿ ಸೋಲ್ವೆಂಟ್ಸ್ ಪ್ರೈ.ಲಿ ಔಷಧ ಘಟಕದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ, ವಿಶಾಖಪಟ್ಟಣಂ ಜಿಲ್ಲೆಯ ಅನಕಪಲ್ಲೆ ಮೂಲದ ಕೆ. ಶ್ರೀನಿವಾಸ್ ರಾವ್ ಎಂಬ 40 ವರ್ಷದ ರಸಾಯನಶಾಸ್ತ್ರಜ್ಞ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯ ಕುಟುಂಬಕ್ಕೆ ಔಷಧ ಕಾರ್ಖಾನೆ ಆಡಳಿತ 35 ಲಕ್ಷ ರೂ. ಮತ್ತು ರಾಜ್ಯ ಸರ್ಕಾರವು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 15 ಲಕ್ಷ ರೂ. ಪರಿಹಾರ ಘೋಷಿಸಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ತನಿಖಾ ಸಮಿತಿಯು ಕಾರ್ಖಾನೆಗಳ ಜಂಟಿ ಮುಖ್ಯ ನಿರೀಕ್ಷಕ ಶಿವಶಂಕರ್ ರೆಡ್ಡಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಇಂಜಿನಿಯರ್ ಸುಭಾನ್, ಡಿಆರ್‌ಡಿಒದ ಕೆ. ಕಿಶೋರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿವಿಎಸ್ ರಾಮ್ ಪ್ರಕಾಶ್ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಎ.ರಾಮಲಿಂಗೇಶ್ವರ ರಾಜು ಅವರನ್ನೊಳಗೊಂಡಿದೆ.
ಜುಲೈ 14 ರಂದು ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಬಳಿ ಔಷಧ ಉತ್ಪಾದನಾ ಘಟಕವೊಂದರಲ್ಲಿ ಸ್ಫೋಟ ಸಂಭವಿಸಿ ಓರ್ವ ಸಿಬ್ಬಂದಿ ಮೃತಪಟ್ಟಿದ್ದರು, ಇನ್ನೋರ್ವ ಗಾಯಗೊಂಡಿದ್ದರು.