ಚಮನ್ (ಪಾಕಿಸ್ತಾನ): ಇಲ್ಲಿನ ಚಮನ್ ಸಿಟಿಯಲ್ಲಿ ನಿರ್ಮಾಣ ಹಂತದ ಕಟ್ಟದ ಬಳಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 5 ಮಂದಿ ಸಾವನ್ನಪ್ಪಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತನಿಖಾ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ, ಸುಧಾರಿತ ಸ್ಫೋಟಕ ಸಾಧನ (ಐಇಡಿ)ವನ್ನು ಬೈಕ್ನಲ್ಲಿ ಇಡಲಾಗಿತ್ತು. ಈ ಬೈಕ್ ಅನ್ನು ಸಿಟಿ ಮಾಲ್ ರಸ್ತೆಯಲ್ಲಿ ನಿಲ್ಲಿಸಿ ಬ್ಲಾಸ್ಟ್ ಮಾಡಲಾಗಿದೆ. ಘಟನೆಯಲ್ಲಿ 5 ಮಂದಿ ಮೃತಪಟ್ಟು 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ ಈ ವೇಳೆ ಹತ್ತಿರದಲ್ಲೇ ಇದ್ದ ಮೆಕ್ಯಾನಿಕ್ ಅಂಗಡಿಯೊಂದು ಸಂಪೂರ್ಣ ಬೆಂಕಿಯಿಂದ ಸುಟ್ಟು ಹೋಗಿದೆ.
ರಕ್ಷಣಾ ಪಡೆಗಳು ಸ್ಥಳಕ್ಕೆ ದೌಡಾಯಿಸಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈವರೆಗೂ ಘಟನೆಯ ಹೊಣೆಯನ್ನು ಯಾವ ಸಂಘಟನೆ ಅಥವಾ ವ್ಯಕ್ತಿ ಹೊತ್ತುಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂತಾಪ ಸೂಚಿಸಿದ್ದು, ಇಂತಹ ಘಟನೆ ನಡೆಯಬಾರದು ಎಂದು ಖಂಡಿಸಿದ್ದಾರೆ. ಅಲ್ಲದೆ ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಲೂಚಿಸ್ತಾನ್ನಲ್ಲಿ ಬಾಂಬ್ ದಾಳಿಗಳು ಹೆಚ್ಚಾಗುತ್ತಿದ್ದು, ಇದಕ್ಕೂ ಮೊದಲು ಜುಲೈ 21ರಂದು ಟರ್ಬತ್ ಬಜಾರ್ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ಮೃತಪಟ್ಟು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.