ಅಲೀಘರ್ ( ಉತ್ತರ ಪ್ರದೇಶ ) : ಕೊರೊನಾ ರೋಗಿಯೊಂದಿಗೆ ಸಂಪರ್ಕ ಹೊಂದಿದ್ದ ಅಲೀಗಢ ಮುಸ್ಲಿಂ ವಿಶ್ವವಿದ್ಯಾನಿಲಯ (ಎಎಂಯು) ಅಧೀನದ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜಿನ 46 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಇನ್ನು ಸೋಂಕಿತ ರೋಗಿಯು ಮಂಗಳವಾರ ನಿಧನ ಹೊಂದಿದ್ದು, ಮೃತ ವ್ಯಕ್ತಿಗೆ ಕೊರೊನಾ ವೈರಸ್ ತಗುಲಿದ್ದರೂ ಪ್ರಾಥಮಿಕ ಪರೀಕ್ಷೆಯ ಬಳಿಕ ಐಸೋಲೆಶನ್ ವಾರ್ಡ್ಗೆ ದಾಖಲಿಸದೆ, ತುರ್ತು ನಿಗಾ ಘಟಕಕ್ಕೆ ದಾಖಲಿಸಿ ನಿರ್ಲಕ್ಷ್ಯ ತೋರಿದ್ದ ಆಸ್ಪತ್ರೆಯ ವೈದ್ಯ ಡಾ.ಅಂಜುಮ್ ಚುಗ್ಟೈ ಅವರನ್ನು ಅಮಾನತುಗೊಳಿಸಲಾಗಿದೆ.
ಅಲ್ಲದೆ ಸಾವನ್ನಪ್ಪಿದ ವ್ಯಕ್ತಿಯ ಎಕ್ಸ್ ರೇ ಮಾಡಿದ ಆರೋಗ್ಯ ಕೇಂದ್ರದ ಪರವಾನಿಗೆ ರದ್ದುಗೊಳಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಎಂಯು ಆಸ್ಪತ್ರೆಯ ಮುಖ್ಯ ಅಧೀಕ್ಷಕ ಪ್ರೊ.ಶಾಹಿದ್ ಸಿದ್ದಿಕಿ ಎಂಟು ವೈದ್ಯರು ಮತ್ತು ಸಿಬ್ಬಂದಿ ತಮ್ಮ ಅಜಾಗರೂಕತೆಯಿಂದ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದು, ಅವರೆಲ್ಲರನ್ನು ಐಸೋಲೇಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ಭೂಷಣ್ ಸಿಂಗ್ ಆಸ್ಪತ್ರೆಗೆ ನೋಟಿಸ್ ಕಳುಹಿಸಿದ್ದು, ವ್ಯಕ್ತಿಯಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದರೂ ಆತ ಐಸೋಲೇಶನ್ ವಾರ್ಡ್ ಬದಲಾಗಿ ತರ್ತು ನಿಗಾ ಘಟಕಕ್ಕೆ ಹೇಗೆ ಹೋದ ಎಂದು ಉತ್ತರಿಸುವಂತೆ ತಿಳಿಸಿದ್ದಾರೆ.