ಕಠ್ಮಂಡು(ನೇಪಾಳ): ಸೆಣಬಿನ ಚೀಲಗಳ ವ್ಯಾಪಾರ ಮಾಡುತ್ತಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ನೇಪಾಳದಲ್ಲಿ ನಡೆದಿದ್ದು, ಸೆಣಬಿನ ಚೀಲದ ನೂರಾರು ಉಂಡೆಗಳು ಅವರ ಮೇಲೆ ಬಿದ್ದಿರುವ ಕಾರಣ ಈ ದುರ್ಘಟನೆ ನಡೆದಿದೆ.

ಶೆಹಜಾದ್ ತನ್ನ ಕುಟುಂಬದೊಂದಿಗೆ ನೇಪಾಳದ ಭೈರವಾಹದಲ್ಲಿ ವಾಸ ಮಾಡುತ್ತಿದ್ದು, ಸೆಣಬಿನ ವ್ಯಾಪಾರ ನಡೆಸುತ್ತಿದ್ದರು. ಬುಧವಾರ ರಾತ್ರಿ ಊಟ ಮಾಡಿ ಎಲ್ಲರೂ ಗೋಡೌನ್ನಲ್ಲಿ ಮಲಗಿದ್ದರು. ಈ ವೇಳೆ ಏಕಾಏಕಿ ನೂರಾರು ಸೆಣಬಿನ ಉಂಡೆಗಳು ಅವರು ಮೇಲೆ ಉರುಳಿ ಬಿದ್ದಿರುವ ಕಾರಣ ಮೇಲೆ ಏಳಲು ಆಗದೇ ಸಾವನ್ನಪ್ಪಿದ್ದಾರೆ. ಬೆಳಗ್ಗೆ ಅಂಗಡಿಯಲ್ಲಿ ಕೆಲಸ ಮಾಡಲು ಬಂದ ಕಾರ್ಮಿಕರು ಅಂಗಡಿ ತೆರೆದು ನೋಡಿದಾಗ ಅಹಿತಕರ ಘಟನೆ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಶಹಜಾದ್ ಹುಸೇನ್, ಪತ್ನಿ ಶಾದಾಬ್ ಖತೂನ್, ಮಗ ಸುಲ್ತಾನ್ ಮತ್ತು ಮಗಳು ಶಹೀನಾ ಖತುನ್ ಸಾವನ್ನಪ್ಪಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಪಡೆದುಕೊಂಡು, ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿ, ತದನಂತರ ಕುಟುಂಬದ ಸದಸ್ಯರಿಗೆ ಹಸ್ತಾಂತರ ಮಾಡಿದ್ದಾರೆ.