ನವದೆಹಲಿ: ರಾಷ್ಟ್ರ ರಾಜಧಾನಿಯ ಝುಗ್ಗಿ ಸರಾಯ್ ಪಿಪಾಲ್ ಥಾಲಾದಲ್ಲಿ ಹೆಚ್ಚು ಶಬ್ಧದ ಧ್ವನಿವರ್ಧಕದ ಮೂಲಕ ಹಾಡು ಹಾಕಿದ್ದಕ್ಕಾಗಿ ಅಕ್ಕಪಕ್ಕದ ಮನೆಯವರ ನಡುವೆ ಉಂಟಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.
ಮಂಗಳವಾರ ಮಧ್ಯಾಹ್ನ 3.15ರ ಸುಮಾರಿಗೆ ಆದರ್ಶ್ ನಗರದ ಮೆಟ್ರೋ ನಿಲ್ದಾಣ ಗೇಟ್ ನಂ. 4, ಝುಗ್ಗಿ ಸರಾಯ್ ಪಿಪಾಲ್ ಥಾಲಾ ಬಳಿ ಜಗಳಕ್ಕೆ ಸಂಬಂಧಿಸಿದಂತೆ ನಮಗೆ ಕರೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚು ಶಬ್ಧದಿಂದ ಕೂಡಿದ ಧ್ವನಿವರ್ಧಕದಲ್ಲಿ ಹಾಡು ಹಾಕಿದ್ದ ಬಗ್ಗೆ ಇಬ್ಬರು ನೆರೆಹೊರೆಯವರ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಬಿಜೆಆರ್ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಸುಶೀಲ್ (29) ಕೊನೆಯುಸಿರೆಳೆದಿದ್ದು, ಆತನ ಇಬ್ಬರು ಸಹೋದರರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಒಬ್ಬ ಸಹೋದರನ ಹೇಳಿಕೆಯನ್ನು ದಾಖಲಿಸಿರುವ ಪೊಲೀಸರು, ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. "ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ.