ಮಹಾಬೂಬಾಬಾದ್ (ತೆಲಂಗಾಣ): ಮಹಾಬೂಬಾಬಾದ್ ಜಿಲ್ಲೆಯಲ್ಲಿ ಪತ್ರಕರ್ತನ ಪುತ್ರನನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ತೆಲುಗು ಮಾಧ್ಯಮವೊಂದರ ವರದಿಗಾರನ ಪುತ್ರ ಒಂಭತ್ತು ವರ್ಷದ ದೀಕ್ಷಿತ್ ರೆಡ್ಡಿಯನ್ನು ಅಕ್ಟೋಬರ್ 18ರ ಭಾನುವಾರ ಅಪಹರಿಸಲಾಗಿದ್ದು, ಬಾಲಕನ್ನು ಬಿಡುಗಡೆ ಮಾಡಲು 45 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.
ಆದರೆ ತೆಲಂಗಾಣ ಪೊಲೀಸರ ಪ್ರಕಾರ, ಅಪಹರಣದ ಒಂದು ಗಂಟೆಯೊಳಗೆ ಬಾಲಕನನ್ನು ಕೊಲ್ಲಲಾಗಿದೆ. ಮೃತದೇಹವನ್ನು ಗುರುವಾರ ಮುಂಜಾನೆ ಮಹಬೂಬಾದ್‌ನಿಂದ ಐದು ಕಿಲೋ ಮೀಟರ್ ದೂರದಲ್ಲಿರುವ ಬೆಟ್ಟದ ಮೇಲೆ ಪೊಲೀಸರು ಪತ್ತೆ ಮಾಡಿದ್ದಾರೆ.
ದುರಂತ ಅಂತ್ಯ ಕಂಡ ಮೆಹಬೂಬಾಬಾದ್ ಪತ್ರಕರ್ತನ ಪುತ್ರನ ಅಪಹರಣ ಪ್ರಕರಣ!
ಮಹಾಬೂಬಾದ್‌ನ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕೋಟಾ ರೆಡ್ಡಿ ಅವರ ಪ್ರಕಾರ, ಅಪಹರಣಕಾರರು ಕುಟುಂಬದ ಪರಿಚಯಸ್ಥರಾಗಿದ್ದು, ಪತ್ತೆಯಾಗಬಹುದೆಂಬ ಭಯದಿಂದ ಬಾಲಕನನ್ನು ಕೊಂದಿದ್ದಾರೆ ಎಂದು ತಿಳಿಸಿದ್ದಾರೆ.
ದೀಕ್ಷಿತ್ನನ್ನು ಅಕ್ಟೋಬರ್ 15ರಂದು ಅಪಹರಿಸಲಾಗಿತ್ತು. ಶೀಘ್ರವಾಗಿ ಹಣ ಸಂಪಾದಿಸಲು ಮನೋಜ್ ರೆಡ್ಡಿ, ಸಾಗರ್ ಮತ್ತು ಇತರ ಇಬ್ಬರು ದೀಕ್ಷಿತ್ನನ್ನು ಅಪಹರಿಸಿದ್ದಾರೆ. ಭಾನುವಾರ ಸಂಜೆ 6.00 ಗಂಟೆಗೆ ಬಾಲಕನನ್ನು ಅಪಹರಿಸಿ ಬೈಕ್‌ನಲ್ಲಿ ಕರೆದೊಯ್ಯಲಾಯಿತು. ಅದೇ ದಿನ ರಾತ್ರಿ 9.00ಕ್ಕೆ ಪೋಷಕರಿಗೆ ಕರೆ ಮಾಡಿ 45 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಎಸ್‌ಪಿ ಹೇಳಿದ್ದಾರೆ.
"ಈ ಪ್ರಕರಣದಲ್ಲಿ 24 ಜನರನ್ನು ತನಿಖೆ ಮಾಡಲಾಗಿದೆ. ಅಪಹರಣಕಾರರನ್ನು ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ಸುಳ್ಳು. ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸಲಾಗುತ್ತದೆ" ಎಂದಿದ್ದಾರೆ.