ನವದೆಹಲಿ: ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಕೇಂದ್ರಾಡಳಿತ ಪ್ರದೇಶದಲ್ಲಿ ಸಂವಹನ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದ್ದು, ಅಲ್ಲಿನ ಜನರು ಮಾಹಿತಿಗಾಗಿ ರೇಡಿಯೋ ಒಂದನ್ನೇ ನೆಚ್ಚಿಕೊಂಡು ಕುಳಿತಿದ್ದಾರೆ.
370ನೇ ವಿಧಿ ರದ್ದತಿ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಗಲಭೆಗಳು ಆಗದಂತೆ ನೋಡಿಕೊಳ್ಳಲು ಹಾಗೂ ಪರಿಸ್ಥಿತಿ ತಹಬದಿಗೆ ಬರುವವರೆಗೂ ಇಂಟರ್ನೆಟ್, ಕೇಬಲ್ ಟೆಲಿವಿಷನ್ ಸೇವೆ, ಮೊಬೈಲ್ ಫೋನ್ ಸಂಪರ್ಕವನ್ನು ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದರಿಂದ ಕಳೆದ ಎರಡು ವಾರಗಳಿಂದ ಅಲ್ಲಿನ ನಾಗರಿಕರಿಗೆ ಹೊರ ಜಗತ್ತಿನ ಅರಿವೇ ಇಲ್ಲದಂತಾಗಿದೆ.
ಸದ್ಯ ಅಲ್ಲೀಗ ರೇಡಿಯೋ ಒಂದೇ ಕಾರ್ಯ ನಿರ್ವಹಿಸುತ್ತಿದ್ದು, ಆಲ್ ಇಂಡಿಯಾ ರೇಡಿಯೋದಲ್ಲಿ (AIR) ಏನು ಸುದ್ದಿ ಪ್ರಸಾರವಾಗುತ್ತದೆಯೋ ಅಷ್ಟನ್ನೇ ತಿಳಿದುಕೊಂಡು ಜನರು ಜೀವನ ಸಾಗಿಸುತ್ತಿದ್ದಾರೆ.