ಅನುಗುಲ್ (ಒಡಿಶಾ): ಮೂರೊತ್ತಿನ ಊಟಕ್ಕೆ ಮೀನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬ ಈಗ ಮೊಸಳೆ ಸಂರಕ್ಷಣಾ ಯೋಜನೆಯಿಂದ ಬೀದಿಗೆ ಬೀಳುವಂತಾಗಿದೆ.
ಒಡಿಶಾದ ಮಹಾನಂದಿ ನದಿಯ ಸಾಟ್ಕೋಸಿಯಾ ಕಮರಿಯಲ್ಲಿ ಮೊಸಳೆ ಸಂರಕ್ಷಣಾ ಯೋಜನೆಯ ಅನುಷ್ಠಾನಕ್ಕಾಗಿ ಸಾಂಪ್ರದಾಯಿಕ ಮೀನುಗಾರ ಸಮುದಾಯಕ್ಕೆ ಸೇರಿದ ಮುನ್ನೂರು ಕುಟುಂಬಗಳು ಈಗ ಮೀನುಗಾರಿಕೆಯಿಂದ ಹಿಂದೆ ಸರಿಯಬೇಕಿದೆ. ರಾಜ್ಯ ಅರಣ್ಯ ಇಲಾಖೆಯು ಕಮರಿಯಲ್ಲಿ ಮೀನುಗಾರಿಕೆ ಚಟುವಟಿಕೆಗೆ ನಿರ್ಬಂಧ ಹೇರಿರುವುದರಿಂದ, ಅಲ್ಲಿ ಮೀನು ಹಿಡಿಯುವ ಮೂಲಕ ವರ್ಷಗಳಿಂದ ಜೀವನೋಪಾಯವನ್ನು ಉಳಿಸಿಕೊಂಡಿದ್ದ ಈ ಮೀನುಗಾರರ ಕುಟುಂಬಗಳಿಗೆ ಈಗ ದಿಕ್ಕೇ ತೋಚದಂತೆ ಆಗಿದೆ.
ತಮ್ಮ ಕುಟುಂಬವನ್ನು ಸಾಕಲು ಮೀನುಗಾರಿಕೆಗಿಂತ ಬೇರೆ ಪರ್ಯಾಯ ಜೀವನೋಪಾಯದ ಮೂಲವಿಲ್ಲದ ಹಿನ್ನೆಲೆ ಊಟವೂ ಇಲ್ಲದೇ ಪರಿತಪಿಸುತ್ತಿದ್ದಾರೆ. 11 ಕಿ.ಮೀ ಪ್ರದೇಶವನ್ನು ಅರಣ್ಯ ಇಲಾಖೆ ಮೀನುಗಾರಿಕೆ ನಿಷೇಧ ವಲಯವೆಂದು ಘೋಷಿಸಿದೆ. ಇದರ ಪರಿಣಾಮವಾಗಿ ಅಂಗುಲ್ ಜಿಲ್ಲೆಯ ಸಟ್ಕೋಸಿಯಾ ಕಮರಿಯ ಸುತ್ತಮುತ್ತಲಿನ ಕಣಿವೆಯಲ್ಲಿ ವಾಸಿಸುತ್ತಿದ್ದ ಮೀನುಗಾರರ ಸಮುದಾಯದ ಮುನ್ನೂರು ಕುಟುಂಬಗಳು ಈಗ ಬೀದಿಗೆ ಬಿದ್ದಿವೆ.
ತಲೆಮಾರುಗಳಿಂದ ಇವರು ನದಿಯಲ್ಲಿ ಮೀನು ಹಿಡಿಯುವುದರ ಮೂಲಕ ತಮ್ಮ ಜೀವನೋಪಾಯವನ್ನು ಕಂಡುಕೊಂಡಿದ್ದರು. ನದಿಯ ಈ 11 ಕಿ.ಮೀ ವಿಸ್ತಾರದಲ್ಲಿ ಸಾಕಷ್ಟು ಪ್ರಮಾಣದ ಮೀನುಗಳು ಲಭ್ಯವಿರುವುದರಿಂದ ಅವರು ಕಮರಿಯ ಸುನಾಖಾನಿಯಿಂದ ರಾಮಗಾಂವ್ ಕಾಲುವೆಯವರೆಗಿನ ಪ್ರದೇಶದಲ್ಲಿ ಹೆಚ್ಚಾಗಿ ಮೀನು ಹಿಡಿಯುತ್ತಿದ್ದರು. ಆದರೆ, ಈಗ ಮೊಸಳೆಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನದಿಯಲ್ಲಿ ಹೆಚ್ಚಿನ ಮೊಸಳೆಗಳನ್ನು ಸಾಕುವ ಯೋಜನೆಯೊಂದಿಗೆ ಅರಣ್ಯ ಇಲಾಖೆ ಕಮರಿಯಲ್ಲಿ ಮೀನುಗಾರಿಕೆ ಚಟುವಟಿಕೆಯನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಂಡಿದೆ.
ಮೀನುಗಾರಿಕೆಗೆ ನಿರ್ಬಂಧಗಳನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ನಂತರದ ಹಂತದಲ್ಲಿ, ಈ ಜನರಿಗೆ ಜೀವನೋಪಾಯದ ಪರ್ಯಾಯ ಮೂಲಗಳನ್ನು ಒದಗಿಸಲಾಗುವುದು ಎನ್ನುತ್ತಾರೆ ಇಲ್ಲಿನ ಅರಣ್ಯ ಅಧಿಕಾರಿಗಳು.