ನವದೆಹಲಿ: ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ದೇಶ ಒಂದು ರೇಷನ್ ಕಾರ್ಡ್ ಯೋಜನೆಯನ್ನು ಪರಿಶೀಲನೆ ನಡೆಸಿದರು.
ಸೂಕ್ತ ತಾಂತ್ರಿಕ ಸಿದ್ಧತೆಗಳನ್ನು ಪರಿಶೀಲಿಸಿ ಮೂರು ರಾಜ್ಯಗಳಾದ ಮಣಿಪುರ, ನಾಗಾಲ್ಯಾಂಡ್ ಮತ್ತು ಉತ್ತರಾಖಂಡ್ ಹಾಗು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರವನ್ನು 'ಒಂದು ದೇಶ, ಒಂದು ರೇಷನ್ ಕಾರ್ಡ್ ಯೋಜನೆ ವ್ಯಾಪ್ತಿಗೆ ಸೇರಿಸಲಾಗಿದೆ. ಈಗಾಗಲೇ ಸಂಯೋಜಿಸಲಾಗಿರುವ 20 ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಕ್ಕೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಈ ರಾಜ್ಯಗಳನ್ನು ಹೊಸದಾಗಿ ಸೇರ್ಪಡೆಗೊಳಿಸಿದೆ. ಈ ಮೂಲಕ, ದೇಶದ 24 ರಾಜ್ಯಗಳು ಒಂದು ದೇಶ ಮತ್ತು ಒಂದು ರೇಷನ್ ಕಾರ್ಡ್ ವ್ಯಾಪ್ತಿಗೆ ಬಂದಿವೆ ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಜ್ಯಗಳ ಸಂಯೋಜನೆಯ ಮೂಲಕ, ಈಗ ದೇಶದಲ್ಲಿ 65 ಕೋಟಿ(ಶೇ.80) ರಷ್ಟು ಎನ್‌ಎಫ್‌ಎಸ್‌ಎ ಜನಸಂಖ್ಯೆಯು ಆಹಾರ ಧಾನ್ಯಗಳನ್ನು ದೇಶದ ಯಾವುದೇ ರಾಜ್ಯ/ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿದ್ದರೂ ಪಡೆಯಬಹುದು.
ಯೋಜನೆಯ ಉದ್ದೇಶವೇನು?
ಒಂದು ದೇಶ ಒಂದು ರೇಷನ್ ಕಾರ್ಡ್ ದೇಶದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013 ರಂತೆ ಫಲಾನುಭವಿಗಳಿಗೆ ಆಹಾರದ ಭದ್ರತೆಯನ್ನು ನೀಡುವ ಉದ್ದೇಶ ಹೊಂದಿದೆ. ಈ ಮೂಲಕ ಫಲಾನುಭವಿಗಳು ದೇಶದ ಯಾವುದೇ ಮೂಲೆಯಲ್ಲಿದ್ದರೂ ನೂತನ ವ್ಯವಸ್ಥೆಯಲ್ಲಿ ಪಡಿತರ ಪಡೆಯಬಹುದು.