ನವದೆಹಲಿ: ದೇಶದಲ್ಲಿರುವ 2,992 ಕೋರ್ಟ್‌ಗಳ ಪೈಕಿ ಸುಮಾರು 2,927 ಕೋರ್ಟ್ ಸಂಕೀರ್ಣಗಳನ್ನು ಹೈ ಸ್ಪೀಡ್ ವ್ಯಾಪ್ತಿಗೆ ತಂದಿದ್ದು, ಇ-ಕೋರ್ಟ್ ಯೋಜನೆಯಡಿ ಹೈ ಸ್ಪೀಡ್ ವೈಡ್ ಏರಿಯಾ ನೆಟ್‌ವರ್ಕ್ (WAN) ಸಂಪರ್ಕ ಕಲ್ಪಿಸಲಾಗಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ತಿಳಿಸಿದೆ.
ವ್ಯಾನ್ ಸಂಪರ್ಕದ ಕೆಲಸ ಈಗಾಗಲೇ ಶೇಕಡಾ 97.86 ರಷ್ಟು ಪೂರ್ಣಗೊಂಡಿದೆ. ಬಿಎಸ್‌ಎನ್‌ಎಲ್ ಜೊತೆಗೂಡಿ ಜಸ್ಟೀಸ್ ವಿಭಾಗ ಉಳಿದ ನ್ಯಾಯಾಲಯಗಳಲ್ಲಿನ ಕೆಲಸವನ್ನು ಕೈಗೆತ್ತಿಕೊಂಡಿದೆ. ಇದು ವಿಶ್ವದಲ್ಲೇ ಅತಿ ದೊಡ್ಡ ಸಂಪರ್ಕದ ನೆಟ್‌ವರ್ಕ್ ಆಗಿದೆ. ಸುಪ್ರೀಂಕೋರ್ಟ್‌ನ ಇ-ಕಮಿಟಿ ಈವೊಂದು ಯೋಜನೆ ಸಂಪರ್ಕ ಕಲ್ಪಿಸಲು ಸೂಚಿಸಿತ್ತು. ಆಪ್ಟಿಕಲ್ ಫೈಬರ್ ಕೇಬಲ್(ಒಎಫ್‌ಸಿ), ರೇಡಿಯೋ ಫ್ರಿಕ್ವೇನ್ಸಿ (ಆರ್‌ಎಫ್), ವಿಸ್ಯಾಟ್ ಸೇರಿದಂತೆ ಇತರ ಸಂಪರ್ಕಗಳ ಸೇವೆ ಒದಗಿಸಲಾಗಿದೆ.
ಇ-ಕೋರ್ಟ್ ಯೋಜನೆಯಡಿ ಎಲ್ಲ ಕೋರ್ಟ್‌ಗಳಿಗೆ ಬಿಎಸ್‌ಎನ್‌ಎಲ್ ಮೂಲಕ ಎಂಪಿಎಲ್‌ಎಸ್ ವಿಪಿಎನ್ ಸೇವೆ ಒದಿಸುವುದನ್ನು 2018ರಲ್ಲಿ ಕಡ್ಡಾಯ ಮಾಡಲಾಗಿತ್ತು. ಆದರೆ, ಕೆಲವು ಪ್ರದೇಶಗಳಲ್ಲಿ ಇದ್ದ ನ್ಯಾಯಾಲಯಗಳಿಗೆ ಭೂಮಿಯ ಒಳಗಡೆಯಿಂದ ಕೇಬಲ್ ಅವಳಡಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಕೆಲವು ಪ್ರದೇಶಗಳಲ್ಲಿ ತಂತ್ರಜ್ಞಾನ ಅವಳಡಿಕೆಗೆ ಸೂಕ್ತವಾಗದ ಪ್ರದೇಶ (ಟಿಎನ್‌ಎಫ್) ಇಂತಹ ಸ್ಥಳಗಳಲ್ಲಿ ಆರ್‌ಎಫ್ ಮತ್ತು ವಿಸ್ಯಾಟ್‌ನಂತಹ ಪರ್ಯಾಯ ಮಾರ್ಗ ಅಳವಡಿಸಿಕೊಳ್ಳಲಾಗಿತ್ತು.
ಬಿಎಸ್‌ಎನ್‌ಎಲ್, ಕೋರ್ಟ್ ಸೇರಿದಂತೆ ಹಲವರೊಂದಿಗೆ ನಿರಂತರ ಸಭೆಗಳನ್ನು ನಡೆಸಿದ ಬಳಿಕ ಅವರ ಸಹಕಾರದೊಂದಿಗೆ ಇದೀಗ ಟಿಎನ್‌ಎಫ್‌ಗಳನ್ನು ಕಡಿಮೆ ಮಾಡಲಾಗಿದೆ. 2019ರಲ್ಲಿದ್ದ 58 ಟಿಎನ್‌ಎಫ್‌ಗಳ ಸಂಖ್ಯೆಯನ್ನು 2020ರ ವೇಳೆಗೆ 14ಕ್ಕೆ ಇಳಿಕೆ ಮಾಡಲಾಗಿದೆ. ಇದೀಗ ಜಸ್ಟೀಸ್ ವಿಭಾಗ, 5 ಟಿಎನ್‌ಎಫ್‌ಗಳನ್ನು ಹೊಂದಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಮುದ್ರದೊಳಗಡೆ ಕೇಬಲ್ ಅವಳಡಿಕೆಗೂ ಮುಂದಾಗಿದೆ.
ಕೋವಿಡ್‌ನಿಂದಾಗಿ ಆನ್‌ಲೈನ್ ಮೂಲಕ ಕೋರ್ಟ್ ಕಲಾಪಗಳನ್ನು ನಡೆಸಿದ್ದು, ಹೆಚ್ಚಿನ ಒತ್ತಡಕ್ಕೆ ಕಾರಣವಾಗಿತ್ತು. ಇದರಿಂದಾಗಿ ಜಸ್ಟೀಸ್ ವಿಭಾಗ, ಬಿಎಸ್‌ಎನ್‌ಎಲ್, ಎನ್‌ಐಸಿ, ಇ-ಕಮಿಟಿ ಸೇರಿದಂತೆ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿತ್ತು.