ರಾಂಪುರ(ಉತ್ತರ ಪ್ರದೇಶ): ತನ್ನ ಯೂನಿವರ್ಸಿಟಿಗಾಗಿ ರೈತರ ಭೂಮಿಯನ್ನು ಕಬಳಿಸಿದ ಆರೋಪ ಸಂಬಂಧ ಸಮಾಜವಾದಿ ಪಕ್ಷದ ನಾಯಕ, ಸಂಸದ ಆಜಂ ಖಾನ್ ವಿರುದ್ಧ ಕಳೆದೊಂದು ತಿಂಗಳಲ್ಲಿ 27 ಕೇಸ್‌ಗಳು ದಾಖಲಾಗಿವೆ.
ಜುಲೈ 11ರಿಂದ 20ಕ್ಕೂ ಹೆಚ್ಚು ರೈತರು ತಮ್ಮ ಭೂಮಿ ಕಬಳಿಸಿದ್ದಾರೆ ಎಂದು ಆಜಂ ಖಾನ್ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ 27 ಪ್ರಕರಣ ದಾಖಲಿಸಿದ್ದು ತನಿಖೆ ನಡೆಯುತ್ತಿದೆ ಎಂದು ರಾಂಪುರದ ಎಸ್ಪಿ ಅಜಯ್ ಪಾಲ್ ಶರ್ಮ ಮಾಹಿತಿ ನೀಡಿದ್ರು.
ಭಾರತೀಯ ದಂಡ ಸಂಹಿತೆ 323, 342, 447, 389, 506 ಕಲಂ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಭೂಮಿ ಅತಿಕ್ರಮಣ ದೂರು ಸಾಬೀತಾದಲ್ಲಿ 10 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ದಂಡ ಹಾಕುವ ಸಾಧ್ಯತೆ ಇದೆ ಎಂದಿದ್ದಾರೆ.
ಅಖಿಲೇಶ್ ಯಾದವ್ ಸಿಎಂ ಆಗಿದ್ದಾಗ ಆಜಾಂ ಖಾನ್ ಅವರು ಮೊಹಮ್ಮದ್ ಆಲಿ ಜೌಹರ್ ವಿವಿಯ ಸಂಸ್ಥಾಪಕರು ಹಾಗೂ ಕುಲಪತಿಗಳೂ ಆಗಿದ್ದರು. ಈ ವೇಳೆ ಅವರ ವಿರುದ್ಧ ರೈತರ ಭೂಮಿ ಕಬಳಿಸಿದ ಆರೋಪ ಕೇಳಿಬಂದಿದೆ.