ರಾಜಸ್ಥಾನ: ಇಲ್ಲಿನ ಪಾಲಿ ಜಿಲ್ಲೆಯಲ್ಲಿ ಕೊರೊನಾ ಕೇಸ್ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ರಾತ್ರಿ (ಮಂಗಳವಾರ) ಹೊಸದಾಗಿ 39 ಹೊಸ ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದರಲ್ಲಿ ರೋಹ್ಟ್ ಪ್ರದೇಶದ ಗಾಜನ್ಗಢ ಪ್ರದೇಶದ ಜೋಧಪುರ್-ಪಾಲಿ ಟೋಲ್ನ 26 ಸಿಬ್ಬಂದಿಗೆ ಸೋಂಕು ವಕ್ಕರಿಸಿದೆ.
ಈ ಎಲ್ಲಾ 26 ಸೋಂಕಿತ ನೌಕರರನ್ನು ಆ್ಯಂಬುಲೆನ್ಸ್ ಮೂಲಕ ಪೊಲೀಸರು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಜೊತೆಗೆ ಟೋಲ್ ಬ್ಲಾಕ್ ಅನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ. ಇದೀಗ ಪಾಲಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 641 ಕ್ಕೇರಿದೆ.
ಜಿಲ್ಲಾಧಿಕಾರಿ ಅಂಶದೀಪ್ ತಡರಾತ್ರಿ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯ ಪ್ರಕಾರ, ಪಾಲಿ ನಗರದಲ್ಲಿ ಇಬ್ಬರು, ರೋಹ್ಟ್ ಉಪವಿಭಾಗದಲ್ಲಿ 69, ದೇಸೂರಿಯಲ್ಲಿ ಇಬ್ಬರು, ಸುಮೇರ್‌ಪುರದಲ್ಲಿ 6 ಹೊಸ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಈವರೆಗೆ 16,260 ಮಾದರಿಗಳನ್ನು ಪರೀಕ್ಷೆಗೆ ಕಳಿಸಲಾಗಿದೆ. ಅದರಲ್ಲಿ 14,273 ಮಾದರಿ ವರದಿಗಳು ನೆಗೆಟಿವ್ ಬಂದಿವೆ. 462 ಮಾದರಿಗಳ ವರದಿ ಇನ್ನೂ ಬರಬೇಕಿದೆ. ಈವರೆಗೆ ಪಾಲಿಯಲ್ಲಿ 479 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.