ಜಮ್ಮು(ಜಮ್ಮು ಮತ್ತು ಕಾಶ್ಮೀರ): ಕಳೆದ ಎರಡು ವಾರಗಳ ಕಾಲ ನಡೆಸಲಾದ ಒಂಭತ್ತು ವಿವಿಧ ಕಾರ್ಯಾಚರಣೆಗಳಲ್ಲಿ 6 ಉನ್ನತ ಕಮಾಂಡರ್‌ಗಳು ಸೇರಿ 22 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್‌ಬಾಗ್ ಸಿಂಗ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್, ಶೋಪಿಯಾನ್‌ನಲ್ಲಿ ಕಳೆದ ಎರಡು ದಿನಗಳಲ್ಲಿ ಹಿಜ್ಬುಲ್ ಮುಜಾಹಿದ್ದೀನ್ (HM) ಸಂಘಟನೆಯ 9 ಉಗ್ರರು ಹತರಾಗಿದ್ದಾರೆ. ಸೋಮವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಎರಡು ವಾರಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿವೆ. ಕಳೆದ ಎರಡು ದಿನದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ 9 ಭಯೋತ್ಪಾದಕರು ಹತರಾಗಿದ್ದು, ಅವರಲ್ಲಿ ಮೂವರು ಉನ್ನತ ಕಮಾಂಡರ್‌ಗಳು ಸೇರಿದ್ದಾರೆ. ಮುಗ್ಧ ನಾಗರಿಕರ ಹತ್ಯೆ, ಪೊಲೀಸ್ ಮತ್ತು ಭದ್ರತಾ ಪಡೆಗಳ ಮೇಲಿನ ದಾಳಿ ಸೇರಿದಂತೆ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ.
ಅವಂತಿಪೋರಾದಲ್ಲಿ ಉಗ್ರರ ತಂಡಕ್ಕೆ ಸೇರಲು ಹೊಸ ಹುಡುಗರನ್ನು ಸಿದ್ಧಪಡಿಸುತ್ತಿದ್ದವರನ್ನು ಪೊಲೀಸರ ತಂಡ ಬಂಧಿಸಿದೆ. ಈ ವೇಳೆ ಮೂವರು ಯುವಕರನ್ನು ಉಗ್ರರ ಹಿಡಿತದಿಂದ ರಕ್ಷಿಸಿ ಅವರ ಕುಟುಂಬಗಳಿಗೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.