ಹೈದರಾಬಾದ್: 26 ಜುಲೈ,1999 ಭಾರತೀಯರೆಲ್ಲರೂ ಶೌರ್ಯ, ಪರಾಕ್ರಮದಿಂದ ವಿಜಯೋತ್ಸವ ಆಚರಿಸಿದ ಈ ದಿನ ಚಿರಸ್ಮರಣೀಯವಾದುದು. ಪಾಪಿ ಪಾಕಿಗಳಿಗೆ ದಿಟ್ಟತನದ ಉತ್ತರ ನೀಡಿ, ಭಾರತದ ಸಾರ್ವಭೌಮತ್ವವನ್ನು ಎತ್ತಿಹಿಡಿದ ವೀರ ಸೇನಾನಿಗಳಿಗೆ ಎದೆಯುಬ್ಬಿಸಿ ಸಲಾಂ ಹೇಳುವ ಹೆಮ್ಮೆಯ ದಿನವಿದು.
ಹೌದು, ಕಾರ್ಗಿಲ್ ವಶಪಡಿಸಿಕೊಳ್ಳಲು ನರಿಬುದ್ಧಿ ಉಪಯೋಗಿಸಿದ್ದ ಪಾಕಿಗಳಿಗೆ ಸಿಂಹಸ್ವರೂಪಿ ಭಾರತೀಯ ಯೋಧರು ಎಂದಿಗೂ ನೆನಪಿಸಿಕೊಳ್ಳುವಂತ ಪಾಠ ಕಲಿಸಿದ ವಿಜಯ ದಿವಸವನ್ನು ಇಡೀ ಭಾರತ ಧೀರೋತ್ಸಾಹದಿಂದ ಆಚರಿಸುತ್ತಿದೆ.
ಆಪರೇಷನ್ ವಿಜಯ್ ನಡೆದು ಇಂದಿಗೆ ಬರೋಬ್ಬರಿ 20 ವರ್ಷ. ಮಹತ್ತರವಾದ ಈ ದಿನವನ್ನು ಸ್ಮರಣೆ, ಹರ್ಷ, ನಾವೀನ್ಯತೆ ಎಂಬ ಥೀಮ್ ಮೂಲಕ ಭಾರತದೆಲ್ಲೆಡೆ ಆಚರಿಸಲಾಗುತ್ತಿದೆ. ಭಾರತ ಮಾತೆಯ ರಕ್ಷಣೆಗಾಗಿ ಅಂದು ಕಂಕಣಬದ್ಧರಾಗಿ ಹೋರಾಡಿದ ವೀರ ಯೋಧರಿಗೆ ಆತ್ಮಪೂರ್ವಕ ನಮನ ಸಲ್ಲಿಸಲಾಗುತ್ತಿದೆ.
ಅಂದು ಆಗಿದ್ದು...
ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯ ಕಾರ್ಗಿಲ್ ಪ್ರದೇಶದತ್ತ ವಕ್ರದೃಷ್ಟಿ ಬೀರಿದ್ದ ಪಾಕಿ ಸೈನಿಕರು ಅಲ್ಲಿನ ಕೆಲ ಪರ್ವತಗಳನ್ನು ಮುತ್ತಿಗೆ ಹಾಕಿದರು.
ಪಾಕಿಗಳನ್ನು ಅಲ್ಲಿಂದ ಓಡಿಸಲು ಸನ್ನದ್ಧರಾದ ಭಾರತೀಯ ಸೈನಿಕರು ಹಲವು ತುಕಡಿಗಳಾಗಿ ವಿಭಾಗಿಸಿಕೊಂಡು ದಾಳಿಗೆ ಮುಂದಾದರು. ಅಂದಿನ ಪ್ರಧಾನಿ ವಾಜಪೇಯಿ ಅವರು ಪ್ರದರ್ಶಿಸಿದ ಧೈರ್ಯ, ನಮ್ಮ ಯೋಧರು ಪಾಕಿಗಳನ್ನು ಬಗ್ಗುಬಡಿಯಲು ಅನುಕೂಲವಾಯ್ತು.
ಕಾರ್ಗಿಲ್ ಹಾಗೂ ದ್ರಾಸ್ನಂತಹ ಅತಿ ಕಠಿಣ ಪ್ರದೇಶಗಳನ್ನು ವೈರಿಗಳ ಗುಂಡಿನ ಪ್ರವಾಹದ ನಡುವೆಯೂ ಬೇಧಿಸಿ, ಭಾರತದ ವಿಜಯ ಧ್ವಜ ನೆಟ್ಟರು ನಮ್ಮ ಹೆಮ್ಮೆಯ ಧೀರ ಯೋಧರು. ಟೈಗರ್ ಹಿಲ್ ವಶದಿಂದ ಆರಂಭವಾದ ವಿಜಯ ಯಾತ್ರೆ ಜುಲೈ 26ರಂದು ಕಾರ್ಗಿಲ್ ವಶಪಡಿಸಿಕೊಳ್ಳುವ ಮೂಲಕ ಯಶಸ್ವಿಯಾಗಿ ತೆರೆಕಂಡಿತು.
ಹಲವು ದಿನಗಳ ಘನಘೋರ ಯುದ್ಧದಲ್ಲಿ ರೈಫಲ್ಮ್ಯಾನ್ ಸಂಜಯ್ ಕುಮಾರ್, ಗ್ರನೇಡಿಯರ್ ಯೋಗೇಂದ್ರ ಸಿಂಗ್ ಯಾದವ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ಅನೂಜ್ ನಯ್ಯರ್, ಕ್ಯಾಪ್ಟನ್ ಎನ್., ಕೆಂಗುರೂಸ್, ಲೆಫ್ಟಿನೆಂಟ್ ಕೆಶಿಂಗ್ ಕ್ಲಿಫಾರ್ಡ್ ನೊಂಗ್ರುಮ್, ಮೇಜರ್ ಪದ್ಮಪಾಣಿ ಆಚಾರ್ಯ, ಮೇಜರ್ ರಾಜೇಶ್ ಸಿಂಗ್ ಅಶಿಕಾರಿ, ಕರ್ನಲ್ ಸೋನಂ ವಾಂಗ್ಚುಂಗ್, ಮೇಜರ್ ವಿವೇಕ್ ಗುಪ್ತ, ನಾಯಕ್ ದಿಗೇಂದ್ರ ಕುಮಾರ್ ಸೇರಿದಂತೆ ಹಲವರು ಹುತಾತ್ಮರಾದರು.