ನವದೆಹಲಿ: ಇಪ್ಪತ್ತು ತಿಂಗಳ ಹೆಣ್ಣು ಮಗುವೊಂದು ಸಾವನ್ನಪ್ಪುವುದಕ್ಕೂ ಮೊದಲು ಐದು ಜನರಿಗೆ ಬದುಕು ಕೊಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಆಶಿಶ್ ಕುಮಾರ್ ಮತ್ತು ಬಬತಾ ಅವರ ಪುತ್ರಿ ಧನಿಷ್ಠ ಜನವರಿ 8ರಂದು ಬಾಲ್ಕನಿಯಲ್ಲಿ ಆಟವಾಡ್ತಿದ್ದ ವೇಳೆ ಕೆಳಗೆ ಬಿದ್ದಿದ್ದಾಳೆ. ಗಂಭೀರವಾಗಿ ಗಾಯಗೊಂಡ ಮಗುವನ್ನು ತಕ್ಷಣವೇ ಶ್ರೀಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಧನಿಷ್ಠಳ ಮಿದುಳು ಜನವರಿ 11ರಂದು ನಿಷ್ಕ್ರೀಯಗೊಂಡಿದೆ. ಆದರೆ ದೇಹದ ಉಳಿದ ಎಲ್ಲ ಅಂಗಗಳು ಕೆಲಸ ಮಾಡುತ್ತಿದ್ದವು. ಇನ್ನೇನು ಮಗು ಅಬ್ಬಬ್ಬಾ ಅಂದರೆ 4ರಿಂದ 5 ದಿನ ಬದುಕಲಷ್ಟೇ ಸಾಧ್ಯವಿದೆ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ.
ಈ ವೇಳೆ ತಂದೆ, ತಾಯಿ ಮಗುವಿನ ಅಂಗಾಗ ದಾನ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಮಗುವಿನ ಎರಡು ಕಣ್ಣು, ಹೃದಯ, ಎರಡು ಕಿಡ್ನಿ ಮತ್ತು ಕರುಳು ದಾನ ಮಾಡಿದ್ದಾರೆ. ಈ ಮೂಲಕ ಮಗು ಐವರಿಗೆ ಹೊಸ ಜೀವ ಕೊಟ್ಟಿದೆ.
ಮಗುವಿನ ಸಾವಿನ ನೋವಿನ ನಡುವೆಯೂ ಪೋಷಕರು ತೆಗೆದುಕೊಂಡಿರುವ ನಿರ್ಧಾರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಜತೆಗೆ ಅತಿ ಕಿರಿಯ ವಯಸ್ಸಿನಲ್ಲಿ ಬಹು ಅಂಗಾಗ ದಾನಿ ಮಾಡಿದ ಕೀರ್ತಿಗೆ ಈ ಪುಟಾಣಿ ಭಾಜನವಾಗಿದೆ.