ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ಇಬ್ಬರು ಹಿರಿಯ ಸಚಿವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮೋತಿ ಸಿಂಗ್ ಎಂದೇ ಪ್ರಸಿದ್ಧರಾಗಿರುವ ಉತ್ತರ ಪ್ರದೇಶ ಗ್ರಾಮೀಣಾಭಿವೃದ್ಧಿ ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ಸೋಂಕಿಗೆ ಒಳಗಾಗಿದ್ದು, ಅವರನ್ನು ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಎಸ್‌ಜಿಪಿಜಿಐಎಂಎಸ್) ದಾಖಲಿಸಲಾಗಿದೆ. ಸಚಿವರ ಪತ್ನಿ, ಮಗ, ಸೊಸೆ ಮತ್ತು ಮೊಮ್ಮಕ್ಕಳು ಎಲ್ಲರ ಕೋಬಿಡ್ ಪರೀಕ್ಷಾ ವರದಿ ಕೂಡ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಲಖನೌ ಸಿಎಂಒ ನರೇಂದ್ರ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ರಾಜ್ಯದ ಆಯುಷ್ ಸಚಿವಾಲಯ ಮುಖ್ಯಸ್ಥ ಧರಮ್ ಸಿಂಗ್ ಸೈನಿ ಅವರಿಗೂ ಸೋಂಕು ದೃಢಪಟ್ಟಿದ್ದು, ಅವರನ್ನು ಪಿಲಖ್ನಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿದೆ. ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ 27 ಜನರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಹರಾನ್ಪುರದ ಸಿಎಂಒ ಬಿಎಸ್ ಸೋಧಿ ತಿಳಿಸಿದ್ದಾರೆ.
ರಾಜ್ಯದ ಪ್ರತಿಪಕ್ಷದ ನಾಯಕ ಮತ್ತು ಹಿರಿಯ ಸಮಾಜವಾದಿ ಶಾಸಕ ರಾಮ್ ಗೋವಿಂದ್ ಚೌಧರಿಗೆ ಕೂಡ ವೈರಸ್ ಅಂಟಿದ್ದು, ಅಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಹೃದಯ ಸಂಬಂಧಿ ಕಾಯಿಲೆಯಿಂದ ಸಹ ಬಳಲುತ್ತಿದ್ದು, ಆಮ್ಲಜನಕದ ಸಹಾಯದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಯುಪಿಯ ಕೊರೊನಾ ಚಿತ್ರಣ:
ಉತ್ತರ ಪ್ರದೇಶದಲ್ಲಿ ಈವರೆಗೆ 773 ಮಂದಿ ಕೊರೊನಾಗೆ ಬಲಿಯಾಗಿದ್ದು, 25 ಸಾವಿರಕ್ಕೂ ಹೆಚ್ಚು ಕೇಸ್ಗಳು ಪತ್ತೆಯಾಗಿವೆ.