ಬಟಿಂಡಾ(ಪಂಜಾಬ್) : ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ.. ಯಾವುದೇ ಕೆಲಸ ಮಾಡಬೇಕಿದ್ರೂ ಅದಕ್ಕೆ ಕೀಳರಿಮೆ ಇರಬಾರದು ಅಂತಾ ಪಂಜಾಬ್‌ನ ಇಬ್ಬರು ಪುತ್ರಿಯರು ಸಾಬೀತುಪಡಿಸ್ತಿದ್ದಾರೆ. ಸಾಬೂ ಬಟಿಂಡಾದ ನಿವಾಸಿಗಳಾದ ನೀತು ಮತ್ತು ರೋಶ್ನಿ ಎಂಬ ಈ ಇಬ್ಬರು ಬಾಲಕಿಯರು ಓದೋಕು ಸೈ, ಕೆಲಸ ಮಾಡಕೂ ಜೈ ಎಂದು ತೋರಿಸಿದ್ದಾರೆ.
ಈ ಇಬ್ಬರು ಸಿಖ್ ಸಹೋದರಿಯರು, ಕುಟುಂಬವನ್ನು ಪೋಷಿಸಲು ಪೋಷಕರ ಹೆಗಲಿಗೆ ಹೆಗಲುಕೊಟ್ಟು ದುಡಿಯುತ್ತಿದ್ದಾರೆ. ಬೀದಿಗಳಲ್ಲಿ ಹಣ್ಣುಗಳನ್ನು ಮಾರುವ ಮೂಲಕ ಸಹೋದರಿಯರಿಬ್ಬರೂ ತಮ್ಮ ಹೆತ್ತವರಿಗೆ ಬೆಂಬಲವಾಗಿದ್ದಾರೆ.
ಈಟಿವಿ ಭಾರತ ತಂಡದೊಂದಿಗೆ ಮಾತನಾಡಿದ 10ನೇ ತರಗತಿ ವಿದ್ಯಾರ್ಥಿನಿ ರೋಶ್ನಿ, ತಮ್ಮ ಮನೆಯಲ್ಲಿ ತುಂಬಾ ಬಡತನವಿದೆ. ಆದರೂ ತಂದೆ ವಿದ್ಯಾಭ್ಯಾಸದಿಂದ ನಮ್ಮನ್ನು ವಂಚಿಸಿಲ್ಲ. ಹೀಗಾಗಿ ನಾವಿಬ್ಬರು ತಂದೆಯ ಸಹಾಯಕ್ಕೆ ನಿಂತಿದ್ದೇವೆ. ನಾವು ಬೆಳಗ್ಗೆ ಮೂರು ಗಂಟೆಗೆ ಎದ್ದು ಹೋಗಿ ಹಣ್ಣು ಖರೀದಿಸಿ ತಂದು ನಂತರ ನಮ್ಮ ಬಂಡಿಯಲ್ಲಿ ಇಟ್ಟು ಹಣ್ಣನ್ನು ಮಾರಾಟ ಮಾಡುತ್ತೇವೆ. ಜೊತೆಗೆ ರಸ್ತೆಯಲ್ಲೇ ಮಾರಾಟದ ಜೊತೆಗೆ ಆನ್‌ಲೈನ್‌ನಲ್ಲಿ ಪಾಠ ಕೇಳುತ್ತೇವೆ ಎಂದರು.
ವಿಶೇಷ ಅಂದ್ರೇ ತಾವೇ ಸ್ವತಃ ಜೀಪ್‌ವೊಂದನ್ನ ತಾವೇ ಚಲಾಯಿಸಿಕೊಂಡು ಹಣ್ಣು ತರೋದರಲ್ಲೂ ಇವರಿಬ್ಬರೂ ಸಿದ್ಧ ಹಸ್ತರು. ಇದನ್ನು ಕಂಡ ಪೋಷಕರ ಹಕ್ಕುಗಳ ಸಂಘದ ಸದಸ್ಯ ಸಂಜೀವ್ ಜಿಂದಾಲ್ ಎಂಬುವರು, ಈ ಮಕ್ಕಳು ಹಣ್ಣುಗಳನ್ನು ಮಾರಾಟ ಮಾಡುವುದರ ಜೊತೆಗೆ ಆನ್‌ಲೈನ್‌ನಲ್ಲಿ ಅಧ್ಯಯನ ಮಾಡುತ್ತಾರೆ. ಈ ವೇಳೆ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಇಂತಹ ಕುಟುಂಬಗಳಿಗೆ ಸರ್ಕಾರ ನೆರವಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.