ಜಮ್ಮು: ಅಂತಾರಾಷ್ಟ್ರೀಯ ಗಡಿ ರೇಖೆಯ ನಿಯಮಗಳನ್ನು ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ ಸೈನಿಕರ ಕ್ರೌರ್ಯಕ್ಕೆ ಗಡಿ ವ್ಯಾಪ್ತಿಯ ಹಳ್ಳಿಗಳಲ್ಲಿ 16 ಸಾಕು ಪ್ರಾಣಿಗಳು ಮೃತಪಟ್ಟಿವೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ರಜೋರಿ ಜಿಲ್ಲೆಗಳ ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ. ಪಾಕ್ ಸೈನಿಕರ ಅಟ್ಟಹಾಸಕ್ಕೆ ಭಾರತೀಯ ಸೇನೆ ದಿಟ್ಟ ಪ್ರತ್ಯುತ್ತರ ನೀಡಿದೆ. ಮುಂಜಾಗೃತಾ ಕ್ರಮವಾಗಿ ಗಡಿ ಭಾಗದ ನಿವಾಸಿಗಳನ್ನು ಹಾಗೂ ಶಾಲಾ ಮಕ್ಕಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಪಾಕ್ ಸೇನೆಯ ಗುಂಡಿನ ದಾಳಿಗೆ ಸುಮಾರು 16 ಹಸುಗಳು ಮೃತಪಟ್ಟಿವೆ ಎಂದು ಭಾರತೀಯ ಸೇನೆ ತಿಳಿಸಿದೆ.
ಪಾಕಿಸ್ತಾನ ಸೇನೆ ರಜೋರಿ ಮತ್ತು ಪೂಂಚ್ ಜಿಲ್ಲೆಯ ಮೆಂಧರ್, ಶಹಪುರ್, ಕೆರ್ನಿ ಹಾಗೂ ಬಾಲಾಕೋಟ್ ಪ್ರದೇಶದ ನೌಶೇರಾ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸುತ್ತಿದೆ. ನೌಶೇರಾ ವಲಯದಲ್ಲಿ ಶುಕ್ರವಾರ ರಾತ್ರಿ 8 ರಿಂದ 10 ಗಂಟೆವರೆಗೆ ಪಾಕ್ ಸೇನೆ ಮೊದಲು ಕದನ ವಿರಾಮ ಉಲ್ಲಂಘಿಸಿತು. ನಂತರ ಮೆಂಧರ್ ವಲಯದ ಬಾಲಾಕೋಟ್ ಪ್ರದೇಶದಲ್ಲಿ ರಾತ್ರಿ 11.45ರಿಂದ ಬೆಳಿಗ್ಗೆ 2ರವರೆಗೆ ಸಣ್ಣ ಪ್ರಮಾಣದ ಶೆಲ್ ದಾಳಿ ನಡೆಸಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.