ಜಲಂಧರ್(ಪಂಜಾಬ್) : ಇಲ್ಲಿನ ಕಪುರ್ಥಾಲಾದ 15 ವರ್ಷದ ಬಾಲಕಿ ತನ್ನ ಮೊಬೈಲ್ ಫೋನ್ ಕಸಿಯಲು ಬಂದ ಖದೀಮರೊಡನೆ ಹೋರಾಡಿ ಸಾಹಸ ಮೆರೆದಿದ್ದಾಳೆ. ಕಳ್ಳರೊಂದಿಗೆ ಹೋರಾಡುವಾಗ ಆಕೆ ತನ್ನ ಜೀವನದ ಬಗ್ಗೆ ಯೋಚಿಸಿರಲಿಲ್ಲ.
ಯಾಕೆಂದರೆ, ದಿನಗೂಲಿ ಮಾಡ್ತಿರುವ ಆಕೆಯ ತಂದೆ ಮಗಳ ಆನ್‌ಲೈನ್ ಕ್ಲಾಸ್‌ಗಾಗಿ ಆ ಮೊಬೈಲ್ ಕೊಡಿಸಿದ್ದರು. ಇಂದು ಈ ಮೊಬೈಲ್ ಫೋನ್ ಬಾಲಕಿಯ ಪುಸ್ತಕ, ಶಾಲೆ ಮತ್ತು ಟೀಚರ್ ಆಗಿದೆ.
ಕೊರೊನಾದಿಂದಾಗಿ ಶಾಲೆಗಳು ಮುಚ್ಚಿದ ನಂತರ, ಎಲ್ಲಾ ಶಾಲೆಗಳು ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡುತ್ತಿವೆ. ಶ್ರೀಮಂತ ಮತ್ತು ಮಧ್ಯಮ ವರ್ಗದ ಜನರು ತಮ್ಮ ಮಕ್ಕಳಿಗೆ ಮೊಬೈಲ್ ಫೋನ್ ನೀಡುವುದು ಕಷ್ಟವೇನಲ್ಲ. ಆದರೆ, ಬಡ ಮಕ್ಕಳಿಗೆ ಇದರಿಂದ ಬಹಳ ಕಷ್ಟವಾಗುತ್ತಿದೆ.
ಕುಸುಮ್ ಜಲಂಧರ್‌ನ ಫತೇಪುರಿ ಪ್ರದೇಶದ ನಿವಾಸಿ. ಇತರ ಮಕ್ಕಳಂತೆ ಕುಸುಮ್‌ಗೂ ಶಾಲೆಯಿಂದ ಆನ್‌ಲೈನ್‌ನಲ್ಲಿ ಪಾಠ ಹೇಳಲಾಗ್ತಿದೆ. ಆದರೆ, ಆನ್‌ಲೈನ್ ಕ್ಲಾಸ್‌ಗಾಗಿ ತನ್ನ ತಂದೆ ಕೊಡಿಸಿದ ಮೊಬೈಲ್‌ನ, ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕುಸುಮ್ ಕೈಯಿಂದ ಕಸಿದುಕೊಳ್ಳಲು ಪ್ರಯತ್ನಿಸಿದರು.
ತಕ್ಷಣ ಕುಸುಮ್ ಕಳ್ಳರೊಂದಿಗೆ ಹೋರಾಡಿ ತನ್ನ ಮೊಬೈಲ್‌ನ ರಕ್ಷಿಸಲು ಮುಂದಾಗುತ್ತಾಳೆ. ಆದರೆ, ಕಳ್ಳರೊಂದಿಗಿನ ಜಗಳದಲ್ಲಿ ಕುಸುಮ್ನ ಕೈಗೆ ಬಲವಾಗಿ ಏಟಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಪಕ್ಕದಲ್ಲಿದ್ದ ಜನರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.